ನ್ಯೂಸ್

ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಸಿಎಂಗೆ ಚಿನ್ನದ ಪದಕ ಖಚಿತ: ಕಾಂಗ್ರೆಸ್​ ವಿರುದ್ಧ ರಾಜ್ಯ ಬಿಜೆಪಿ ವ್ಯಂಗ್ಯ

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ದೊಡ್ಡ ಉರುಳಾಗಿ ಪರಿಣಮಿಸಿರುವ ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ವಿಪಕ್ಷ ಬಿಜೆಪಿ ಆಡಳಿತ ಪಕ್ಷದ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರೆಸಿದ್ದು, ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ.

ಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ, ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ ಖಚಿತ-ನಿಶ್ಚಿತ-ಖಂಡಿತ. ನೆರೆಯಿಂದ ಹಾನಿಗೊಳಗಾದ ಕನ್ನಡಿಗರ ಕಂಬನಿ ಒರೆಸುವದಕ್ಕಿಂತಲೂ, ಹೈಕಮಾಂಡ್‌ ಗೆ ಕಪ್ಪ ತಲುಪಿಸುವ ಕಾರ್ಯದಲ್ಲಿ ಮಗ್ನವಾಗಿರುವ ಸಿಎಂ-ಡಿಸಿಎಂ ಎಂದು ಕಿಡಿಕಾರಿದೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್​ ಸರ್ಕಾರದ ಸಚಿವ ಸಂಪುಟದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಈ ಸಂಬಂಧ ಹೈಕಮಾಂಡ್​ ಜೊತೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೆ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳು ಕುರಿತು ಚರ್ಚಿಸಲು ಸಿಎಂ ಹಾಗೂ ಡಿಸಿಎಂರನ್ನು ಹೈಕಮಾಂಡ್ ಕರೆಸಿಕೊಂಡಿದೆ ಎಂದು ಹೇಳಲಾಗುತ್ತಿದೆ.