ಬೆಂಗಳೂರು: ಮಂಗಳವಾರ ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಸೈಯದ್ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದ ಮೊಗಸಾಲೆಯಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಬಿಜೆಪಿ ಆರೋಪ ಮಾಡಿದ್ದು ಕಾಂಗ್ರೆಸ್ ಮತ್ತು ಬೆಜೆಪಿ ಪಕ್ಷಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ.
ಬುಧವಾರ ಬಿಜೆಪಿ ಕರ್ನಾಟಕ ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿರುವ ಒಂದು ಪೋಸ್ಟರ್ ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ. ಈ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಕಠಿಣ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ ಎಂದು ರೀ ಟ್ಟೀಟ್ ಮಾಡಿ ಎಚ್ಚರಿಕೆ ನೀಡಿದೆ.
ಬುಧವಾರ ಮಧ್ಯಾಹ್ನ ಟ್ಟೀಟ್ ಮಾಡಿರುವ ಬಿಜೆಪಿ ಭಾರತದಲ್ಲಿ ಪಾ"ಕೈ"ಸ್ತಾನವನ್ನು ಬೆಂಬಲಿಸುವವರ "ಕೈ"ಗಳನ್ನು ಹೆಡೆಮುರಿ ಕಟ್ಟಿ ಎಂದಿದೆ. ಹಾಗೂ ಕೈ ಸಿಂಬಲ್ನಲ್ಲಿ ಪಾಕೈಸ್ತಾನ ಎಂದು ವಿಶೇಷ ಪೋಸ್ಟರ್ ಪ್ರಕಟಿಸಿದೆ. ನೀವು ದೂರು ದಾಖಲಿಸುವುದು ಪಾಕಿಸ್ತಾನದಲ್ಲೋ ಅಥವಾ ಭಾರತದಲ್ಲೋ ಎಂದು ಕಾಂಗ್ರೆಸ್ನ್ನು ಪ್ರಶ್ನೆ ಮಾಡಿದೆ.
ಅದನ್ನೇ ರೀಟ್ಟೀಟ್ ಮಾಡಿರುವ ಕಾಂಗ್ರೆಸ್ ಈ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಕಠಿಣ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ ಎಂದು ಎಚ್ಚರಿಕೆಯನ್ನೂ ನೀಡಿದೆ.