ನ್ಯೂಸ್

ದೇಶದಲ್ಲಿ ದ್ವೇಷ-ಹಿಂಸಾಚಾರ ಹರಡುವುದೊಂದೆ ಅವರ ಕೆಲಸ; Rahul Gandhi

ಶ್ರೀನಗರ: ಬಿಜೆಪಿ ಮತ್ತು ಆರ್​ಎಸ್​ಎಸ್​​ ಆರೆಸ್ಸೆಸ್ ದೇಶಾದ್ಯಂತ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದಾರೆ. ಅವರಿಗೆ ದ್ವೇಷವನ್ನು ಹರಡುವುದು ಹೇಗೆ ಎಂದು ಮಾತ್ರ ತಿಳಿದಿದೆಯೇ ಹೊರತು ದ್ವೇಷವನ್ನು ದ್ವೇಷದಿಂದ ಕೊನೆಗೊಳಿಸಲು ಸಾಧ್ಯವಿಲ್ಲ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ ಮತ್ತು ಭಾಷೆಗಳ ನಡುವೆ ಒಡಕು ಸೃಷ್ಟಿಸುತ್ತಿದ್ದಾರೆ. ಅವರು (ಬಿಜೆಪಿ-ಆರ್‌ಎಸ್‌ಎಸ್) ಎಲ್ಲಿಗೆ ಹೋದರೂ ಜಾತಿ, ಧರ್ಮ, ರಾಜ್ಯಗಳ ನಡುವೆ ಒಡಕು ಸೃಷ್ಟಿಸುತ್ತಾರೆ. ಸಂಘರ್ಷವನ್ನು ಪ್ರಚೋದಿಸಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದರು.

ಬಿಜೆಪಿಯು ಪಹಾರಿ ಮತ್ತು ಗುಜ್ಜರ್ ಸಮುದಾಯದ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿದೆ, ಆದರೆ ಪಕ್ಷದ ಈ ಯೋಜನೆ ವಿಫಲವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಆರ್‌ಎಸ್‌ಎಸ್​ನ ದ್ವೇಷದ ಸಂದೇಶಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಪ್ರೀತಿಯ ಸಂದೇಶವನ್ನು ನಂಬುತ್ತದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದ್ವೇಷವನ್ನು ಹರಡುತ್ತಿದ್ದರೆ, 'ಮೊಹಬ್ಬತ್ ಕಿ ದುಕಾನ್' (ಪ್ರೀತಿಯ ಅಂಗಡಿ) ತೆರೆಯುವವರೂ ಇದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ಮಣಿಪುರದಿಂದ ಮಹಾರಾಷ್ಟ್ರದವರೆಗೆ ನಮ್ಮ ಪ್ರಯಾಣವು ದ್ವೇಷವು ಯಾರಿಗೂ ಪ್ರಯೋಜನವಿಲ್ಲ ಎಂಬ ಒಂದೇ ಸಂದೇಶವನ್ನು ಹೊಂದಿದೆ. ದ್ವೇಷವನ್ನು ಪ್ರೀತಿಯಿಂದ ಮಾತ್ರ ಜಯಿಸಲು ಸಾಧ್ಯ ಎಂದು ಹೇಳಿದರು.

ಕಾಂಗ್ರೆಸ್ ಎಲ್ಲರನ್ನು ಒಟ್ಟುಗೂಡಿಸುವ ಮೂಲಕ ಮತ್ತು ಎಲ್ಲರಿಗೂ ಅವರ ಹಕ್ಕುಗಳನ್ನು ನೀಡುವ ಮೂಲಕ ಮುಂದುವರಿಯುತ್ತದೆ. ಕಾಂಗ್ರೆಸ್​ಗೆ ಎಲ್ಲರೂ ಸಮಾನರು ಮತ್ತು ಯಾರನ್ನು ಹಿಂದೆ ಬಿಡುವುದಿಲ್ಲ. ಸಂಸತ್ತಿನಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಿದ್ಧನಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಜನರು ತನಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.(ಏಜೆನ್ಸೀಸ್​​)