ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಏರಿದ ಮೊದಲ ವರ್ಷದ ವಾರ್ಷಿಕೋತ್ಸವನ್ನು ಬಿಜೆಪಿ ಸರಳವಾಗಿ ಆಚರಿಸಲು ನಿರ್ಧರಿಸಿದೆ.
ಕರೊನಾ ವೈರಸ್ ದಾಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸರಳವಾಗಿ ಆಚರಣೆಯಾದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭಾರತದ ರಕ್ಷಕ ಎಂದು ಬಿಂಬಿಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಅಲ್ಲದೆ ಅವರನ್ನು ಕೋವಿಡ್ ನಿಯಂತ್ರಿಸಿದ ಹೀರೋ ಎಂಬ ಮಾಹಿತಿಯನ್ನು ಜನರಿಗೆ ತಲುಪಿಸಲು ಸಿದ್ಧತೆ ನಡೆಯುತ್ತದೆ. ಲಾಕ್ಡೌನ್ ನಂತರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನೀಡಿದ ಸಾಧನೆಯೂ ಇದರಲ್ಲಿ ಸೇರಿದೆ. ಕೇಂದ್ರದಲ್ಲಿ ಬಿಜೆಪಿ ಮೇ 30ರಂದು 2ನೇ ಬಾರಿಗೆ ಅಧಿಕಾರಕ್ಕೆ ಬಂತು.
ಸಾಮಾಜಿಕ ಜಾಲತಾಣದ ಮೂಲಕ ತಲುಪಲು ಯತ್ನ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರನ್ನು ತಲುಪಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೋದಿ ಅಡಿಯಲ್ಲಿ ಭಾರತ ಸುರಕ್ಷಿತವಾಗಿದೆ ಎಂಬ ವ್ಯಾಖ್ಯಾನದ ಮೂಲಕ ಜನರನ್ನು ತಲುಪಲು ಬಿಜೆಪಿ ಚಿಂತನೆ ನಡೆಸಿದೆ.
ಸಚಿವಾಲಯಗಳಿಂದ ಮಾಹಿತಿ: 2ನೇ ಬಾರಿ ಮೋದಿ ಅಧಿಕಾರಕ್ಕೆ ಬಂದ ನಂತರ ಕೈಗೊಂಡ ಕೆಲಸ ಹಾಗೂ ಮಾಡಿದ ಸಾಧನೆಗಳ ಪಟ್ಟಿಯನ್ನು ನೀಡುವಂತೆ ಪ್ರಧಾನಿ ಕಾರ್ಯಾಲಯ ಎಲ್ಲ ಸಚಿವಾಲಯಗಳಿಗೆ ಪತ್ರ ಬರೆದಿದೆ. ಆದ್ಯತೆ ಮೇರೆಗೆ ಪಟ್ಟಿ ತಯಾರಿಸಿಕೊಡುವಂತೆ ಕೋರಿದೆ.
ಸಚಿವಾಲಯ ನೀಡಿದ ಸಾಧನೆಯ ಪಟ್ಟಿಯನ್ನು ಆಧರಿಸಿ ಪ್ರಮುಖವಾದ ಸಾಧನೆಗಳ ಮೇಲೆ ಗಮನಹರಿಸಿ ವರದಿಯ ಕಾರ್ಡ್ ತಯಾರಿಸಿ ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ಮಾಹಿತಿ ತಲುಪಿಸಲು ಬಿಜೆಪಿ ಮುಂದಾಗಿದೆ.
ಸಾಧನೆಯ ವರದಿ ಕಾರ್ಡ್ ಅನ್ನು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸಿದ್ಧಪಡಿಸಲಿದೆ.
ಕರೊನಾ ವೈರಸ್ ದಾಳಿಯನ್ನು ನಿಯಂತ್ರಣದ ವಿಚಾರವನ್ನೇ ಪ್ರಧಾನವಾಗಿಟ್ಟುಕೊಂಡು ಮೋದಿ ಅವರನ್ನು ಬಿಂಬಿಸಲು ತಯಾರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)