ಬೆಂಗಳೂರು: ರಾಷ್ಟ್ರೀಯ ಚಿಂತಕರ ಸರಣಿ ಕೊಲೆಗಳು ಹಾಗೂ ಸರ್ಕಾರದ ನಡೆಯು ರಾಜ್ಯದಲ್ಲಿ ಟಾರ್ಗೆಟ್ ಕಿಲ್ಲಿಂಗ್ ನಡೆಯುತ್ತಿದೆಯೆ ಎಂಬ ಅನುಮಾನವನ್ನು ಹುಟ್ಟಿ ಹಾಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, ಜೈನಮುನಿ ಬರ್ಬರ ಹತ್ಯೆಯ ಮರುದಿನ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆಯಾಗಿದೆ. ನಿನ್ನೆ ಫಣೀಂದ್ರ ಹಾಗೂ ವಿನುಕುಮಾರ್ ಎಂಬುವರ ಕೊಲೆಗಳಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ ದೌರ್ಬಲ್ಯವನ್ನು ಅನಾವರಣಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಾಗ್ದಾಳಿ ನಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕುಸಿದ ಕಾನೂನು-ಸುವ್ಯವಸ್ಥೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ, ರಾಜ್ಯಪಾಲರಿಗೆ ದೂರು
ಜೈನಮುನಿಗಳ ಪೈಶಾಚಿಕ ಹತ್ಯೆ ಪ್ರಕರಣದಲ್ಲಿ, ಕೊಲೆಯು ಬಡ್ಡಿ ವ್ಯವಹಾರಕ್ಕೆ ನಡೆದಿದೆ ಎಂದು ಬಿಂಬಿಸುವ ಪ್ರಯತ್ನವಾಯಿತು. ಪ್ರತಿಭಟನೆ ನಂತರ ಎಫ್ಐಆರ್ನಲ್ಲಿ ದಲಾಯತ್ ಎಂಬ ಆರೋಪಿ ಹೆಸರನ್ನು ಸೇರಿಸಲಾಯಿತು. ಜೈನಸನ್ಯಾಸ ಅತ್ಯಂತ ಕಠಿಣವಾದದ್ದು. ಅಂತಹ ಮುನಿಗಳ ಹತ್ಯೆಯನ್ನು ಸರ್ಕಾರ ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷಿಸಿತು ಎಂದು ಸಿ.ಟಿ. ರವಿ ಹೇಳಿದ್ದಾರೆ.
ವೇಣುಗೋಪಾಲ್ ನಾಯಕ ಪ್ರಕರಣದಲ್ಲಿ ಕಾಂಗ್ರೆಸ್ ವಿಷಯಾಂತರಕ್ಕೆ ಪ್ರಯತ್ನಿಸುತ್ತಿದೆ. ಆರೋಪಿಗಳಿಗೆ ಬಿರಿಯಾನಿ ಕೊಡಿಸುವುದು ಕಾಂಗ್ರೆಸ್ನ ಇತಿಹಾಸವಾಗಿದೆ. ಹೆಣ ಬೀಳಿಸುವುದೇ ರಾಜಕೀಯವೆಂದು ಕಾಂಗ್ರೆಸ್ ಭಾವಿಸಿದಂತಿದೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ಇದನ್ನೂ ಓದಿ: ಆನೇಕಲ್ ಗಡಿ ಭಾಗಕ್ಕೆ ಬಂದ ಕಾಡಾನೆಗಳು: ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಪರದಾಟ
ಆಕ್ರೋಶ:
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಠ್ಯವನ್ನು ಕಿತ್ತು ಬಿಸಾಕಿದ್ದೇವೆ ಎಂಬ ದಾರ್ಷ್ಟ್ಯದ ಮಾತುಗಳನ್ನಾಡಿದ್ದಾರೆ. ಪಠ್ಯದಲ್ಲಿ ಏನು ತಪ್ಪು ಹುಡುಕಿದ್ದೀರಿ ಎಂಬುದನ್ನು ಮೊದಲು ಹೇಳಬೇಕು. ಜನ ನಿಮಗೆ ಅಧಿಕಾರ ಕೊಟ್ಟಿರುವುದು ಮಕ್ಕಳ ಭವಿಷ್ಯದ ಜೊತೆ ಆಟ ಆಡಲು ಅಲ್ಲ. ಯಾವ ಪಠ್ಯ ಕಿತ್ತು ಬಿಸಾಕಿದ್ಧೆವೆ ಎಂದು ಹೇಳಿದ್ದೀರಾ? ಅದರಲ್ಲಿ ಏನಾದರೂ ರಾಷ್ಟ್ರಘಾತುಕ ಅಂಶವಿದ್ದರೆ ಹೇಳಿ, ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ದೇಶಭಕ್ತಿಯ ಅನಾವರಣದ ವಿಚಾರವನ್ನು ತೆಗೆದು ಹಾಕಿರುವುದನ್ನು ಮರೆಯಬಾರದು ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ತಪ್ಪು ಏನಾಗಿದೆ ಎಂದು ಎಳೆಎಳೆಯಾಗಿ ಬಿಚ್ಚಿಡಬೇಕು. ದುರಂಹಂಕಾರದ ವರ್ತನೆಗೆ ಬಡ್ಡಿ ಸಮೇತ ಚುಕ್ತಾ ಮಾಡುವ ಕೆಲಸವನ್ನು ಕೂಡ ಜನರು ಮಾಡುತ್ತಾರೆ ಎಂದು ಸಿ.ಟಿ.ರವಿ ಎಚ್ಚರಿಸಿದ್ದಾರೆ. ಈ ಹಿಂದೆ ಬರಗೂರು ರಾಮಚಂದ್ರಪ್ಪನವರು ಪಠ್ಯ ಪರಿಷ್ಕರಣೆ ಮಾಡಿದ್ದರು. ಆದರೆ ಅದು ಮಕ್ಕಳ ಕಲಿಕೆಗೆ ಯೋಗ್ಯವಲ್ಲ ಎಂದು ಎನ್ಸಿಇಆರ್ಟಿ 70 ಪುಟಗಳ ವರದಿಯನ್ನು ನೀಡಿತ್ತು. ಸದ್ಯ ಸರ್ಕಾರ ಯಾವ ವರದಿ ತೆಗೆದುಕೊಂಡಿದೆ? ಕ್ಯಾಬಿನೆಟ್‌ನಲ್ಲಿ ಇರುವವರೆಲ್ಲ ಶಿಕ್ಷಣ ತಜ್ಞರಲ್ಲ. ಮಕ್ಕಳ ಪೋಷಕರಿಗೆ ಈ ಕುರಿತು ಕೇಳುವ ಹಕ್ಕಿದೆ ಎಂದು ಸಿ.ಟಿ.ರವಿ ಪ್ರತಿಪಾದಿಸಿದ್ದಾರೆ.(ಏಜೆನ್ಸೀಸ್)