ನವದೆಹಲಿ: ಹಾಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವು ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದು, ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವಿನ ಕಿತ್ತಾಟದಿಂದಲೇ ಹೆಚ್ಚು ಜನರ ಗಮನ ಸೆಳೆಯುತ್ತಿದೆ. ಇದರಲ್ಲಿ ಪ್ರಮುಖವಾಗಿ ವಯನಾಡು ಕ್ಷೇತ್ರದ ಸಂಸದೆ ಪ್ರಿಯಾಂಕ ಗಾಂಧಿ ಅವರ ಬ್ಯಾಗ್ ಪಾಲಿಟಿಕ್ಸ್ ಹೆಚ್ಚು ಸದ್ದು ಮಾಡುತ್ತಿದ್ದು, ಈ ಬಗ್ಗೆ ಚರ್ಚೆಗಳ ನಡೆಯುತ್ತಿವೆ.
ಪ್ಯಾಲಸ್ತೀನ್ ಹಾಗೂ ಬಾಂಗ್ಲಾದೇಶ ಎಂದು ಬರೆದಿರುವ ಬ್ಯಾಗ್ಗಳನ್ನು ಸಂಸತ್ ಅಧಿವೇಶನ್ಕಕೆ ತಂದಿದ್ದ ಪ್ರಿಯಾಂಕಾ ಆಡಳಿತ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಬ್ಯಾಗ್ ಪಾಲಿಟಿಕ್ಸ್ಗೆ ಸಂಬಂಧಿಸಿದಂತೆ ಬಿಜೆಪಿ ಸಂಸದರೊಬ್ಬರು 1984 ಎಂದು ಬರೆದಿರುವ ಬ್ಯಾಗ್ ಒಂದನ್ನು ಪ್ರಿಯಾಂಕಾಗೆ ಗಿಫ್ಟ್ (Gift) ಮಾಡಿದ್ದು, ಈ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ.
ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ 1984 ಎಂದು ಬರೆದಿರುವ ಬ್ಯಾಗ್ಅನ್ನು ಪ್ರಿಯಾಂಕಾಗೆ ಗಿಫ್ಟ್ ನೀಡಿದ್ದು, ಈ ಬಗ್ಗೆ ಮಾತನಾಡಿದ್ದಾರೆ. ಈ ಬ್ಯಾಗ್ ವಿನ್ಯಾಸವು 1984ರ ಸಿಖ್ ವಿರೋಧಿ ದಂಗೆಗಳನ್ನು ಪ್ರತಿನಿಧಿಸುತ್ತದೆ. ಕಾಂಗ್ರೆಸ್‌ನ ತಪ್ಪುಗಳು ಮತ್ತು ಆ ಅವಧಿಯ ದುರಂತವನ್ನು ನೆನಪಿಸುವ ಸಂಕೇತವಾಗಿದೆ. ಪ್ರಿಯಾಂಕಾ ಅವರು ಹೇಗೆ ಬ್ಯಾಗ್ ಮೂಲಕ ಸಂದೇಶ ನೀಡುತ್ತಿದ್ದಾರೋ ಅದೇ ರೀತಿ ಕಾಂಗ್ರೆಸ್ ಇತಿಹಾಸವನ್ನು ನೆನಪಿಸುವಂತೆ ಈ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದೆ ನೀಡಿರುವ ಬ್ಯಾಗ್ಅನ್ನು ಪ್ರಿಯಾಂಕಾ ಸ್ವೀಕರಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಸದ್ಯ ಈ ಬ್ಯಾಗ್ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆ ನಡೆಯುತ್ತಿದೆ.