ನ್ಯೂಸ್

ಅತೃಪ್ತ ಶಾಸಕರ ಸಭೆಯಲ್ಲಿ ಸಚಿವ ಪ್ರಲ್ಹಾದ ಜೋಶಿ

ಬೆಂಗಳೂರು: ಬಿಜೆಪಿಯ ಕೆಲ ಅತೃಪ್ತ ಶಾಸಕರ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗವಹಿಸಿದ್ದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪಕ್ಷದಲ್ಲಿ ಅತೃಪ್ತಿ ಅಲೆ ಎದ್ದಾಗಲೆಲ್ಲ ಒಬ್ಬೊಬ್ಬರು ಅದರ ಸಾರಥ್ಯ ವಹಿಸಿದ್ದಾರೆ. ಈ ಬಾರಿ ಖುದ್ದು ಪ್ರಲ್ಹಾದ ಜೋಶಿ ಅವರೇ ಸಭೆಯಲ್ಲಿ ಭಾಗವಹಿಸಿರುವುದು ಅಚ್ಚರಿ ತಂದಿದೆ ಎಂದು ಮೂಲಗಳು ಹೇಳುತ್ತವೆ. ಕುಮಾರಕೃಪದಲ್ಲಿ ಅಸಮಾಧಾನಗೊಂಡ ಕೆಲ ಶಾಸಕರು ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಜೋಶಿ, ಅವರ ಅಹವಾಲುಗಳನ್ನು ಆಲಿಸಿದ್ದಾರೆ ಎನ್ನಲಾಗಿದೆ. ನಮ್ಮ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ, ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ದೂರುಗಳ ಸುರಿಮಳೆಗೈದ ಶಾಸಕರಿಗೆ ಸಮಾಧಾನ ಹೇಳಿದ್ದಲ್ಲದೆ, ‘ನಾನಿದ್ದೇನೆ ಎಲ್ಲವನ್ನು ನೋಡಿಕೊಳ್ಳುತ್ತೇನೆ’ ಎಂದು ಭರವಸೆ ತುಂಬಿದ್ದಾರೆ ಎನ್ನಲಾಗಿದೆ.

ಸಚಿವ ಸಿ.ಟಿ.ರವಿ ಕೂಡ ಸಭೆಯಲ್ಲಿ ಭಾಗವಹಿಸಿದ್ದು, ದೂರುಗಳನ್ನು ಹೇಳಿಕೊಳ್ಳಲು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಅಲವತ್ತುಕೊಂಡ ಶಾಸಕರಿಗೆ ಭರವಸೆ ನೀಡಿದ್ದ ಸಚಿವರು, ನಡ್ಡಾ ಅವರಿದ್ದ ಚಿನ್ನೇನಹಳ್ಳಿ ಆರ್​ಎಸ್​ಎಸ್ ಕ್ಯಾಂಪ್ ಬಳಿ ಬರುವಂತೆಯೂ ಸೂಚನೆ ನೀಡಿದ್ದಾರೆ. ಆದರೆ, ನಡ್ಡಾ ಬಳಿ ದೂರು ಸಲ್ಲಿಸಲು ಹೊರಟ ಶಾಸಕರಿಗೆ ನಿರಾಸೆಯಾಗಿದೆ. ಅಲ್ಲಿ ಕೇಂದ್ರ ಸಚಿವ ಜೋಶಿ ಅವರನ್ನು ಮಾತ್ರ ಭೇಟಿ ಮಾಡಿದ ನಡ್ಡಾ, ಇನ್ನುಳಿದವರನ್ನು ಭೇಟಿಯಾಗಲಿಲ್ಲ. ಬಳಿಕ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಶಾಸಕರ ಒಂದು ಗುಂಪು ಹಿಂತಿರುಗಿದೆ.

ಅರ್ಜೆಂಟ್ ಹೋಗಬೇಕು ಎಂದಿದ್ದ ಪ್ರಲ್ಹಾದ ಜೋಶಿ

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ಮುಗಿಯುತ್ತಿದ್ದಂತೆ ಚಿನ್ನೇನಹಳ್ಳಿ ಆರ್​ಎಸ್​ಎಸ್ ಜನಸೇವಾ ವಿದ್ಯಾ ಕೇಂದ್ರದಲ್ಲಿದ್ದ ಬಿಜೆಪಿ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಲು ಹೊರಟು ನಿಂತ ಸಿಎಂ ಯಡಿಯೂರಪ್ಪ, ‘ಬನ್ನಿ ಹೋಗಿ ಬರೋಣ’ ಎಂದು ಜೋಶಿ ಅವರಿಗೆ ಕರೆದಿದ್ದಾರೆ. ‘ಇಲ್ಲ ಸರ್. ನಾನು ಅರ್ಜೆಂಟ್ ಹುಬ್ಬಳ್ಳಿಗೆ ಹೋಗಿ, ಅಲ್ಲಿಂದ ದೆಹಲಿಗೆ ಹೋಗಬೇಕಾಗಿದೆ’ ಎಂದು ಹೇಳಿದ ಜೋಶಿ, ಕುಮಾರಕೃಪದಲ್ಲಿನ ಶಾಸಕರ ಸಭೆಗೆ ಹೋಗಿದ್ದು ಬಿಜೆಪಿಯಲ್ಲಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದೆ. ಬಿಜೆಪಿಯೊಳಗೆ ಹೊಗೆಯಾಡುತ್ತಿರುವ ಅತೃಪ್ತಿಗೆ ಈಗ ಪ್ರಲ್ಹಾದಜೋಶಿ ಹೊಸ ನಾಯಕತ್ವ ವಹಿಸಿದ್ದಾರೆಯೇ? ಸಿಎಂ ವಿರುದ್ದ ಸೆಟೆದು ನಿಂತ ಗುಂಪಿನ ಜತೆಗೆ ಜೋಶಿ ಸಾಥ್ ನೀಡುತ್ತಿದ್ದಾರೆಯೇ ಎಂಬ ಸಂಗತಿ ಈಗ ಪಕ್ಷದಲ್ಲಿ ಚರ್ಚೆಯಾಗುತ್ತಿದೆ.