ನ್ಯೂಸ್

VIDEO| 1,200 ಕಾರುಗಳ ಬೆಂಗಾವಲಿನೊಂದಿಗೆ ಕಾಂಗ್ರೆಸ್​ ಸೇರ್ಪಡೆಯಾದ ಕೇಂದ್ರ ಸಚಿವ ಸಿಂಧಿಯಾ ಪರಮಾಪ್ತ

ಭೋಪಾಲ್​: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ದಿನದಿಂದ ದಿನಕ್ಕೆ ಪಕ್ಷಾಂತರ ಪರ್ವ ಜೋರಾಗುತ್ತಿದ್ದು, ಹೊಸ ಬೆಳವಣಿಗೆಯೊಂದರಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅತ್ಯಾಪ್ತ ಸಮಂದರ್​ ಪಟೇಲ್​ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದಾರೆ.

ನೀಮುಚ್​ನ ಜವಾದ್​ನಿಂದ 1,200ಕ್ಕೂ ಹೆಚ್ಚು ಬೆಂಗಾವಲು ವಾಹನಗಳೊಂದಿಗೆ ಭೋಪಾಲ್​ನಲ್ಲಿರುವ ಕಾಂಗ್ರೆಸ್​ ಕಚೇರಿಗೆ ಆಗಮಿಸಿದ ಸಮಂದರ್ ಪಟೇಲ್​​ ರಾಜ್ಯ ಘಟಕದ ಅಧ್ಯಕ್ಷ , ಮಾಜಿ ಸಿಎಂ ಕಮಲ್​ನಾಥ್​ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಸಮಂದರ್​ ಪಟೇಲ್​ ತಮ್ಮ ಬೆಂಬಲಿಗರೊಂದಿಗೆ 1,200ಕ್ಕೂ ಹೆಚ್ಚು ವಾಹನಗಳಲ್ಲಿ ಭೋಪಾಲ್​ಗೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನೀಮುಚ್​ ಪ್ರದೇಶದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಸಮಂದರ್​ ಕಾಂಗ್ರೆಸ್​ಗೆ ಸೇರ್ಪಡೆಯಾಗಿರುವುದರಿಂದ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ತಿಳಿದು ಬಂದಿದೆ.

ನಂಬರ್​ ಒನ್​ ಮಾಡಿದ್ದಾರೆ

ಸಮಂದರ್​ ಪಕ್ಷ ಸೇರ್ಪಡೆಯ ನಂತರ ಮಾತನಾಡಿದ ಮಧ್ಯಪ್ರದೇಶ ಮಾಜಿ ಸಿಎಂ ಕಮಲ್​ನಾಥ್​​ ಪಟೇಲ್​ ಅವರು ಯಾವುದೇ ಷರತ್ತನ್ನು ವಿಧಿಸದೆ, ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್​ಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಸೇರ್ಪಡೆಯಾಗಿದ್ದಾರೆ. ಅವರು ಸತ್ಯವನ್ನು ಒಪ್ಪಿಕೊಂಡು ಕಾಂಗ್ರೆಸ್​ ಪಕ್ಷಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಬಗ್ಗೆ ಸತ್ಯಾಂಶವನ್ನು ಜನತೆಗೆ ಸ್ವತಃ ಅವರೇ ತಿಳಿಸಲಿದ್ದಾರೆ.

2018ರಲ್ಲಿ ಕಾಂಗ್ರೆಸ್​ ಪಕ್ಷ ಸಂಪೂರ್ಣ ಜನಾದೇಶದೊಂದಿಗೆ ಅಧಿಕಾರಕ್ಕೇರಿತ್ತು. ಆದರೆ, ಶಿವರಾಜ್​ ಸಿಂಗ್​ ಚೌಹಾಣ್​ ನೇತೃತ್ವದ ಬಿಜೆಪಿ ಹಣ ಹಾಗೂ ಅಧಿಕಾರ ಬಲದ ಮೂಲಕ ಶಾಸಕರಿಗೆ ಆಮಿಷವೊಡ್ಡಿ ಅವರನ್ನು ಖರೀದಿಸಿ ಸರ್ಕಾರವನ್ನು ರಚಿಸಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 18 ವರ್ಷಗಳು ಕಳೆದರೂ ಹಗರಣಗಳು ಬಿಟ್ಟರೆ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದ್ದಾರೆ.

ಶಿವರಾಜ್​ ಸಿಂಗ್​ ನೇತೃತ್ವದ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ಮಾತ್ರವಲ್ಲದೆ ಮಹಿಳೆಯರು, ರೈತರು, ಮಕ್ಕಳು ಹಾಗೂ ಯುವಕರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿಯೂ ರಾಜ್ಯವನ್ನು ನಂಬರ್​ ಒನ್​ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಜನತೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ವಿದಾಯ ಹೇಳಲು ಸಿದ್ದರಾಗಿದ್ದು ಕಾಂಗ್ರೆಸ್​ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.