ಭೋಪಾಲ್: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಪಕ್ಷಾಂತರ ಪರ್ವ ಜೋರಾಗಿದ್ದು ರಾಜಕೀಯ ಪಕ್ಷದ ನಾಯಕರು ಅತ್ತಿಂದಿತ್ತ ಜಿಗಿಯುತ್ತಿದ್ದಾರೆ.
ಚುನಾವಣೆ ಪರ್ವದಲ್ಲಿ ಇದೆಲ್ಲ ಮಾಮೂಲು ಎಂದು ಹೇಳಬಹುದು. ಆದರೆ, 2020ರಲ್ಲಿ ಮಧ್ಯಪ್ರದೇಶದಲ್ಲಿ ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೈಜ್ನಾಥ್ ಸಿಂಗ್ ಬಿಜೆಪಿ ತೊರೆದಿದ್ದಾರೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬೈಜ್ನಾಥ್ ಮಧ್ಯಪ್ರದೇಶದ ಶಿವಪುರಿ ಭಾಗದಲ್ಲಿ ತಮ್ಮದೇ ಆದ ರಾಜಕೀಯ ಹಿಡಿತವನ್ನು ಹೊಂದಿದ್ಧಾರೆ. ಈ ಬಾರಿ ಸಿಂಗ್ಗೆ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದ್ದು, ಈ ನಿಟ್ಟಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಬೈಜ್ನಾಥ್ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಸುಮಾರು 400ಕ್ಕೂ ಅಧಿಕ ಕಅರುಗಳಲ್ಲಿ ಶಿವಪುರಿಯಿಂದ 300 ಕಿಲೋಮೀಟರ್ ದೂರದಲ್ಲಿರುವ ಭೋಪಾಲ್ಗೆ ತೆರಳಿದ್ದು ವಿಶೇಷವಾಗಿತ್ತು. ಇದೀಗ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಬಾಲಿವುಡ್ ಚಿತ್ರದ ದೃಶ್ಯವನ್ನು ಕಣ್ತುಂಬಿಕೊಂಡಂತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬೈಜ್ನಾಥ್ ಜೊತೆಗೆ ಬಿಜೆಪಿಯ 15 ಮಂದಿ ಜಿಲ್ಲಾ ಮಟ್ಟದ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇವರುಗಳನ್ನು ಪಕ್ಷದ ಹಿರಿಯ ನಾಯಕರಾದ ಕಮಲ್ನಾಥ್, ದಿಗ್ವಿಜಯ್ ಸಿಂಗ್ ಸೇರಿದಂತೆ ಅನೇಕರು ಬರಮಾಡಿಕೊಂಡರು.