ಕೋಲ್ಕತ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಕೇಳಿಬಂದ ಜೈ ಶ್ರೀ ರಾಮ್ ಘೋಷಣೆ ಕೇಳಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಂಡದಂತಾಗಿದ್ದರು. ಇದೀಗ ಅವರನ್ನು ಇನ್ನಷ್ಟು ಸಿಟ್ಟಾಗುವಂತೆ ಮಾಡಿರುವ ಬಿಜೆಪಿ, ಜೈ ಶ್ರೀ ರಾಮ್ ಹಾಡನ್ನು ಬಿಡುಗಡೆ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.
ಜೈ ಶ್ರೀ ರಾಮ್ ವಿಡಿಯೋವನ್ನು ಪಕ್ಷದ ಐಟಿ-ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಟ್ವಿಟ್ಟರ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಅವರ ಟಿಎಂಸಿ ಪಕ್ಷ ಮಾಡುತ್ತಿರುವ ಅನ್ಯಾಯಗಳನ್ನು ವಿಡಿಯೋದಲ್ಲಿ ಜೈ ಶ್ರೀ ರಾಮ್ ಹಾಡಿನ ಹಿನ್ನೆಲೆಯೊಂದಿಗೆ ಪ್ರಸ್ತುತ ಪಡಿಸಲಾಗಿದೆ. ಅದರ ಜತೆ ಬಿಜೆಪಿಯನ್ನು ರಾಜ್ಯದ ಜನರು ಮೆಚ್ಚುತ್ತಿರುವ ಪರಿಯನ್ನೂ ತೋರಿಸಿಕೊಡಲಾಗಿದೆ. ರಾಜ್ಯದ ಪ್ರತಿ ಜನರು ಜೈ ಶ್ರೀ ರಾಮ್ ಎನ್ನಲು ಇಚ್ಛಿಸುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಕೋಲ್ಕತಾದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತ್ಯುತ್ಸವವನ್ನು ನಡೆಸಲಾಗುತ್ತಿತ್ತು. ಆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಜಗದೀಶ್ ಧನಕರ್ ಸೇರಿ ಅನೇಕ ನಾಯಕರು ಭಾಗವಹಿಸಿದ್ದರು. ಅಲ್ಲಿ ಜೈ ಶ್ರೀ ರಾಮ್ ಘೋಷಣೆ ಕೇಳಿಬಂದಿತ್ತು. ಆ ಘೋಷಣೆ ಕೂಗಿದವರ ಮೇಲೆ ಮಮತಾ ಬ್ಯಾನರ್ಜಿ ಸಿಟ್ಟಾಗಿದ್ದರು. (ಏಜೆನ್ಸೀಸ್)