ನ್ಯೂಸ್

ಕೇಂದ್ರದ ಬಿಜೆಪಿ ಸರ್ಕಾರ ಶೀಘ್ರ ಪತನ: ಮತ್ತೆ ಭವಿಷ್ಯ ನುಡಿದ ಅಖಿಲೇಶ್

ಕೋಲ್ಕತ್ತಾ: ಕೇಂದ್ರದ ಬಿಜೆಪಿ ಸರ್ಕಾರ ಮೋಸದ ನಡೆಗಳಿಂದ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಪತನವಾಗಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭವಿಷ್ಯ ನುಡಿದಿದ್ದಾರೆ.

ಕೋಲ್ಕತ್ತಾದಲ್ಲಿ ಭಾನುವಾರ ನಡೆದ ಟಿಎಂಸಿ ಶಾಹಿದ್​ ದಿವಸ್​ ಸಮಾವೇಶದಲ್ಲಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಹಲವು ಅಡೆತಡೆಗಳ ನಡುವೆ ಅಧಿಕಾರ ಹಿಡಿದಿದೆ. ಆದರೆ ಇದು ಎಷ್ಟು ದಿನ ಅಧಿಕಾರದಲ್ಲಿ ಉಳಿಯಲು ಸಾಧ್ಯ ಎಂದು ಪ್ರಶ್ನಿಸಿದರು.

ಬಂಗಾಳದ ಜನರು ಬಿಜೆಪಿ ವಿರುದ್ಧ ಹೋರಾಡಿದರು. ಆ ಪಕ್ಷವನ್ನು ಹಿಂದಕ್ಕೆ ತಳ್ಳಿದರು. ದೆಹಲಿಯ ಗದ್ದುಗೆಯ ಮೇಲೆ ಕುಳಿತಿರುವ ದೊರೆಗಳು ಇನ್ನು ಕೆಲವೇ ದಿನಗಳು ಮಾತ್ರ ಅಧಿಕಾರದಲ್ಲಿ ಇರಲಿದ್ದಾರೆ. ಲೋಕಸಭೆಯಲ್ಲೂ ಇದನ್ನೇ ಹೇಳಿದ್ದೇನೆ. ಇಂದು ಮತ್ತೆ ಅದನ್ನೇ ಹೇಳುತ್ತಿದ್ದೇನೆ. ಕೇಂದ್ರ ಸರ್ಕಾರ ಪತನವಾಗುವುದು ನಿಶ್ಚಿತ ಎಂದರು.

ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಬಿಜೆಪಿಯು ಬಂಗಾಳಕ್ಕೆ ನೆರವು ನಿಲ್ಲಿಸಿದ್ದು, ಇದಕ್ಕೆ ಪ್ರತಿಯಾಗಿ ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

1993 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ 13 ಜನರ ನೆನಪಿಗಾಗಿ ಟಿಎಂಸಿ ಪ್ರತಿ ವರ್ಷ ಈ ಶಾಹಿದ್ ದಿವಸ್ (ಹುತಾತ್ಮರ ದಿನ) ಆಚರಿಸುತ್ತದೆ.