ನ್ಯೂಸ್

ವಿಧಾನ ಪರಿಷತ್ ಚುನಾವಣೆ; ಬಿಜೆಪಿಯಿಂದ ಗಂಭೀರ ಪರಿಗಣನೆ..

Webdesk - Ravikanth

ಬೆಂಗಳೂರು: ಎರಡು ಕ್ಷೇತ್ರಗಳ ಉಪಚುನಾವಣೆ ಮುಗಿದ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿ ವರಿಷ್ಠರು ಚುನಾವಣೆಯನ್ನು ಗಂಭೀರ ವಾಗಿ ಪರಿಗಣಿಸಿದ್ದಾರೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮಹತ್ವದ್ದಾಗಿದೆ. ಕರ್ನಾಟಕದ ಮೇಲ್ಮನೆ ಚುನಾವಣೆಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಬಾಕಿ ಇರುವ ಕ್ಷೇತ್ರಗಳ ಗೊಂದಲ ನಿವಾರಿಸಿ, ಅಂತಿಮ ಪಟ್ಟಿಯನ್ನು ಆದಷ್ಟು ಬೇಗ ಸಂಸದೀಯ ಮಂಡಳಿಗೆ ಶಿಫಾರಸು ಮಾಡಲು ದೆಹಲಿ ನಾಯಕರು ಸೂಚಿಸಿದ್ದಾರೆ. ಜತೆಗೆ ಎಲ್ಲ ಹಂತದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರನ್ನು ತೊಡಗಿಸಬೇಕೆಂದು ಸಿಎಂ, ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲಹೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಸತ್ವ ಪರೀಕ್ಷೆ: ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ನಿರ್ಣಾಯಕರಾಗಲಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಶೇ.65 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ ಎಂದು ಪಕ್ಷದ ನಾಯಕರು ಹೇಳಿಕೊಂಡು ಬೀಗಿದ್ದರು. ಮೇಲ್ಮನೆ ಕದನವು ಕಮಲಪಡೆಗೆ ಸತ್ವ ಪರೀಕ್ಷೆಯಾಗಲಿದ್ದು, ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿಗರ ಸಂಖ್ಯಾ ಬಲವೆಷ್ಟು? ಎಂಬುದು ಹೊರಬೀಳಲಿದೆ. ಗ್ರಾಪಂನ ಒಟ್ಟು 82,756 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 37,000ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಜಯ ಸಾಧಿಸಿದ್ದಾರೆಂದು ಲೆಕ್ಕ ಒಪ್ಪಿಸಿದವರಿಗೆ ನೈಜ ಪರಿಸ್ಥಿತಿ ಅರಿವಾಗಲಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

ರಣತಂತ್ರ ಪರಾಮರ್ಶೆ: ಪ್ರಮುಖ ಕಾಯ್ದೆಗಳಿಗೆ ತಿದ್ದುಪಡಿ, ನೀತಿ-ನಿರ್ಧಾರಗಳು ಮೇಲ್ಮನೆಯಲ್ಲಿ ಎಸ್ ಪಾಸ್ ಆಗುವುದಕ್ಕೆ ಸದ್ಯ ಬಿಜೆಪಿಗೆ ದೊಡ್ಡ ಸವಾಲಾಗಿದೆ. ಮೇಲ್ಮನೆಯಲ್ಲಿ ಮೇಲುಗೈ ಸಾಧಿಸುವುದಕ್ಕೆ ಈ ಚುನಾವಣೆ ಅವಕಾಶ ಕಲ್ಪಿಸಿದೆ. ಅದಕ್ಕೆ ತಕ್ಕುನಾದ ಚುನಾವಣಾ ರಣತಂತ್ರ ರೂಪಿಸಬೇಕೆಂದು ಕೋರ್ ಕಮಿಟಿ ಸಲಹೆ ನೀಡಿದೆ.

ಗ್ರಾಪಂ, ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬಲಾಢ್ಯವಾಗಿದೆ ಎಂಬ ವರದಿ ವರಿಷ್ಠರ ಮುಂದಿದ್ದು, ‘ಅನುಕೂಲಕರ’ ವಾತಾವರಣ ಸದ್ಬಳಕೆಯತ್ತ ಒತ್ತು ನೀಡಿದೆ. ಇದೇ ಕಾರಣಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕರ್ನಾಟಕಕ್ಕೆ ಒಂದು ದಿನ ಮೀಸಲಿಟ್ಟು, ಮೇಲ್ಮನೆ ಸಮರ ತಂತ್ರದ ಕುರಿತು ಪರಾಮಶಿಸಲಿದ್ದಾರೆ. ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರ ಸೇರಿ ಪ್ರಮುಖರ ಜತೆಗೂ ವಿಚಾರ-ವಿನಿಮಯ ನಡೆಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಆಕಾಂಕ್ಷಿಗಳ ಲಾಬಿ: ಒಟ್ಟು 20 ಸ್ಥಳೀಯ ಸಂಸ್ಥೆಗಳ 25 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಪಕ್ಷ ತೀರ್ವನಿಸಿದ್ದು, 14 ಕ್ಷೇತ್ರಗಳಿಗೆ ಉಮೇದುವಾರರು ಪಟ್ಟಿ ಫೈನಲ್ ಆಗಿದೆ. ಇನ್ನುಳಿದ ಆರು ಕ್ಷೇತ್ರಗಳ ಟಿಕೆಟ್​ಗಾಗಿ ಪೈಪೋಟಿ ಹೆಚ್ಚಿದೆ. ಆಕಾಂಕ್ಷಿಗಳ ತೆರೆಮರೆ ಲಾಬಿ ನಡೆಸಿದ್ದು, ಕೆಲವು ಸಚಿವರು ಹಾಗೂ ಪ್ರಭಾವಿಗಳ ನೆರವಿಗೆ ಮೊರೆಯಿಟ್ಟಿದ್ದಾರೆ. ಗೊಂದಲ ನಿವಾರಿಸಿ, ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವ ಉದ್ದೇಶದಿಂದ ರಚಿತ ಸಮಿತಿಯು ಕ್ಷೇತ್ರವಾರು ಮಾಹಿತಿ ತರಿಸಿಕೊಂಡಿದೆ. ಆಯಾ ಸಂಸದ-ಶಾಸಕರು, ಜಿಲ್ಲಾ ಸಮಿತಿ ಅಭಿಪ್ರಾಯ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.