ಬೆಂಗಳೂರು: ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೆಸರು ಕೇಳಿಬರುತ್ತಿದ್ದಂತೆಯೇ ಆಡಳಿತ ಪಕ್ಷವು ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಕಾಲೆಳೆಯಲಾರಂಭಿಸಿದೆ.
ಕಾಗೆ ಹಿಕ್ಕೆ ಹಾಕಿದರೂ ಸಿದ್ದರಾಮಯ್ಯನವರು ಅದರಲ್ಲಿ ಮೂಗು ತೂರಿಸುತ್ತಾರೆ. ಆದರೆ ಈ ಸಿಡಿ ಷಡ್ಯಂತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರದ ಬಗ್ಗೆ ಅವರೇಕೆ ಇನ್ನೂ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದೆ. ಈ ರೀತಿ ಷಡ್ಯಂತ್ರದಲ್ಲಿ ಭಾಗವಹಿಸುವುದು ಯಾವ ಸೆಕ್ಷನ್ ಪ್ರಕಾರ ಪರಾಧವಾಗುತ್ತದೆ ಎಂದು ಜನರ ಮುಂದೆ ತೆರೆದಿಡಿ ಎಂದು ಕೇಳಿದೆ.
ಸಹಾಯ ಮಾಡುವುದಕ್ಕೂ ಷಡ್ಯಂತ್ರದಲ್ಲಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿದೆ. ಷಡ್ಯಂತ್ರದ ಭಾಗವಾಗಿದ್ದುಕೊಂಡ ಕಾರಣದಿಂದಲೇ ಹೆಗಲುಮುಟ್ಟಿ ನೋಡಿಕೊಂಡಿದ್ದಲ್ಲವೇ!? ಮಹಾನಾಯಕರೇ, ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್‌ಗಳೊಂದಿಗೆ ಅಸರಲ್ಲೂ ಈ ಪ್ರಕರಣ ಬೆಳಕಿಗೆ ಬಂದ ನಂತರವೂ ಸಂಬಂಧ ಹೊಂದಿರಲು ಅದು ಹೇಗೆ ಸಾಧ್ಯ? ಎಂದು ಬಿಜೆಪಿ ಮತ್ತೊಂದು ಟ್ವೀಟ್ನಲ್ಲಿ ಡಿ.ಕೆ.ಶಿವಕುಮಾರ್ರನ್ನು ಪ್ರಶ್ನಿಸಿದೆ.
ಶಿವಕುಮಾರ್ ಅವರೇ, ಆರಂಭದಲ್ಲಿ ಹೆಗಲು ಮುಟ್ಟಿಕೊಡು ನನ್ನನ್ನು ಸಿಲುಕಿಸುವ ಪ್ರಯತ್ನ ಎಂದಿರಿ. ಈಗ ಸಂತ್ರಸ್ಥೆ ನನ್ನ ಭೇಟಿಗೆ ಪ್ರಯತ್ನಿಸಿದ್ದು ನಿಜ, ನರೇಶ್ ಮನೆಗೆ ಹೋಗಿದ್ದೇನೆ ಎನ್ನುತ್ತಿದ್ದೀರಿ. ಅಂದರೆ ಪ್ರಕರಣದ ಎಲ್ಲಾ ಆಗುಹೋಗುಗಳು ನಿಮ್ಮ ನಿಯಂತ್ರಣದಲ್ಲೇ ನಡೆಯುತ್ತಿತ್ತು ಎಂಬುದು ಸ್ಪಷ್ಟ ಅಲ್ಲವೇ? ಎಂದೂ ಪ್ರಶ್ನೆ ಕೇಳಲಾಗಿದೆ.