ನ್ಯೂಸ್

ಗ್ರೀಕ್​ ದೇವತೆ ಅಪರಾವತಾರವಂತೆ ಎರಡು ಮುಖದ ಬೆಕ್ಕು...!

ಮಾನವರಲ್ಲಿ ಸಯಾಮಿ ಅವಳಿಗಳ ಜನನದ ಬಗ್ಗೆ ಕೇಳಿರುತ್ತೇವೆ. ಆದರೆ, ಪ್ರಾಣಿಗಳಲ್ಲೂ ಇವು ಅಂಥ ಅಪರೂಪವೇನಲ್ಲ. ಸಾಮಾನ್ಯವಾಗಿ ಎರಡು ತಲೆಯ ಹಾವುಗಳ ಬಗ್ಗೆ ಕೇಳಿರುತ್ತೇವೆ. ಆದರೆ, ಎರಡು ತಲೆಯ ಬೆಕ್ಕುಗಳು ತೀರಾ ಅಪರೂಪ.

ಆದರೆ, ಅಮೆರಿಕದ ಒರೆಗಾನ್​ನಲ್ಲಿರುವ ಬಿ.ಜೆ. ಕಿಂಗ್​ ಎಂಬುವರ ಕುಟುಂಬ ಸಾಕಿರುವ ಬೆಕ್ಕು ಕೆಲ ವಿಶೇಷಗಳನ್ನು ಒಳಗೊಂಡಿದೆ. ಇದಕ್ಕೆ ಎರಡು ತಲೆಗಳಿವೆ. ಆದರೆ, ದೇಹವೊಂದೇ.

ಕಳೆದ ವಾರ ಇವರ ಮನೆಯಲ್ಲಿದ್ದ ಬೆಕ್ಕು ಆರು ಮರಿಗಳನ್ನು ಹಾಕಿತ್ತು. ಒಂದು ಮರಿ ಮಾತ್ರ ಇತರವುಗಳಿಗಿಂತ ಭಿನ್ನವಾಗಿತ್ತು. ಅದಕ್ಕೆ ಎರಡು ತಲೆಗಳಿದ್ದವು. ಇದು ಕುಟುಂಬದ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಎರಡು ತಲೆಗಳ ಜತೆಗೆ, ನಾಲ್ಕು ಕಣ್ಣುಗಳು, ನಾಲ್ಕು ಕಿವಿಗಳು, ಎರಡು ಮೂಗುಗಳಿವೆ. ಹೀಗಾಗಿ ಇದು ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ಇದಕ್ಕೆ ಎರಡು ಮುಖಗಳಿರುವುದರಿಂದ ಇದಕ್ಕೆ ಎರಡು ಹೆಸರನ್ನು ಇರಿಸಲಾಗಿದೆ. ಬಿಸ್ಕಿಟ್ಸ್​ ಹಾಗೂ ಗ್ರೇವಿ ಎಂದು ಕುಟುಂಬದವರು ಕರೆಯುತ್ತಿದ್ದಾರೆ.

ಒಂದು ಬಾಯಿಯಿಂದ ಇದು ಮಿಂಯಾವ್​ ಎಂದು ಧ್ವನಿ ಹೊರಡಿಸಿದರೆ, ಇನ್ನೊಂದರಿಂದ ಆಹಾರ ಸೇವಿಸುತ್ತದೆ ಎಂದು ಕಿಂಗ್​ ತಿಳಿಸುತ್ತಾರೆ. ಇದರ ಜನಪ್ರಿಯತೆ ಯಾವ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಇದಕ್ಕಾಗಿ ಪ್ರತ್ಯೇಕ ಇನ್​ಸ್ಟಾಗ್ರಾಂ ಖಾತೆಯನ್ನೇ ತೆರೆಯಲಾಗಿದೆ. ಹೀಗಾಗಿ ಇದರ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.‘

ಇದರ ವಿಡಿಯೋ ಲಿಂಕ್​ ಇಲ್ಲಿದೆ.........