ನ್ಯೂಸ್

ಪಕ್ಷಿಗಳಲ್ಲೂ ಬ್ರೇಕಪ್ ಆಗ್ತಿವೆ ಅಂದ್ರೆ ನಂಬ್ತೀರಾ? ಈ ಸ್ಟೋರಿ ಓದಿ…

ನವದೆಹಲಿ: ಮನಸ್ತಾಪ, ಹೊಂದಾಣಿಕೆ ಸಮಸ್ಯೆಯಿಂದ ದಂಪತಿಗಳು ಕೋರ್ಟ್​​ ಮೆಟ್ಟಿಲೇರಿ ವಿಚ್ಛೇದನ ಪಡೆಯುತ್ತಾರೆ. ಪ್ರಸ್ತುತ ದಿನಗಳಲ್ಲಿ ಗಂಡ-ಹೆಂಡತಿ ಅನೇಕ ಕಾರಣಕ್ಕೆ ದೂರವಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಈ ನಡುವೆ ಸಂಶೋಧನೆಯೊಂದರ ವರದಿ ಹೊರಬಿದ್ದಿದ್ದು, ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಇದಕ್ಕೆ ಕಾರಣ, ಪಕ್ಷಿಗಳ ನಡುವೆ ನಡೆಯುತ್ತಿರುವ ವಿಚ್ಛೇದನ ಪ್ರಕ್ರಿಯೆ! ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಸಂಶೋಧನೆಯಲ್ಲಿ, ಗಂಡು-ಹೆಣ್ಣು ಜೋಡಿ ಹಕ್ಕಿಗಳ ನಡುವಿನ ಪ್ರತ್ಯೇಕತೆಯನ್ನು 'ವಿಚ್ಛೇದನ' ಎಂಬ ಕರೆಯಲಾಗಿದೆ. ಆಸಕ್ತಿಕರ ಸಂಗತಿಯೆಂದರೆ ಹಕ್ಕಿಗಳು ದೂರವಾಗಲು ಮಾನವರಲ್ಲಿ ಇರುವಂತಹದೇ ಕಾರಣಗಳು ಕಂಡು ಬಂದಿರುವುದು. ಪಕ್ಷಿಗಳ ನಡುವಿನ ವಿಚ್ಛೇದನಕ್ಕೆ ಲೈಂಗಿಕ ಸಂಘರ್ಷ ಮತ್ತು ಸುತ್ತಮುತ್ತಲಿನ ಪರಿಸರದಿಂದ ಉಂಟಾಗುವ ಒತ್ತಡ ಎಂಬುದನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ.

ಸಂಶೋಧನೆ ಏನು ಹೇಳುತ್ತದೆ?

ಪತಿ-ಪತ್ನಿ ವಿಚ್ಛೇದನ ನೀಡುವಂತೆಯೇ ಪಕ್ಷಿಗಳು (ಗಂಡು ಮತ್ತು ಹೆಣ್ಣು ಎರಡೂ) ಕೂಡ ತಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ಕೊನೆಗೊಳಿಸುತ್ತವೆ. ಹವಾಮಾನಕ್ಕೆ ತಕ್ಕಂತೆ ಹಕ್ಕಿಗಳು ವಲಸೆ ಹೋಗುವುದು ಸ್ವಾಭಾವಿಕ. ದೀರ್ಘ ಸಮಯ ವಲಸೆ ಹೋಗುವ ಹಕ್ಕಿಗಳು ವಿಚ್ಛೇದನ ನೀಡುತ್ತವೆ.

ದಿ ರಾಯಲ್ ಸೊಸೈಟಿ ಜರ್ನಲ್(The Royal Society)​ನಲ್ಲಿ ಪ್ರಕಟವಾದ ವರದಿಯು, ಸುಮಾರು 90 ಪ್ರತಿಶತ ಪಕ್ಷಿ ಪ್ರಭೇದಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಅವಧಿಯಲ್ಲಿ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಆದಾಗ್ಯೂ, ಕೆಲವು ಪಕ್ಷಿಗಳು ಸಂತಾನವೃದ್ಧಿ ಋತುಗಳಲ್ಲಿ ಹೊಸ ಸಂಗಾತಿಯನ್ನು ಹುಡುಕಿಕೊಳ್ಳುತ್ತವೆ ಎಂದು ಉಲ್ಲೇಖಿಸಿದೆ.

ವಿಜ್ಞಾನಿಗಳು ಹೇಳೋದೇನು?

ಗಂಡು ಪಕ್ಷಿಗಳು ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಇಟ್ಟುಕೊಳ್ಳುವುದು ವಿಚ್ಛೇದನದ ಹಿಂದಿನ ಮುಖ್ಯ ಕಾರಣ. ಹೆಚ್ಚಿನ ಹಕ್ಕಿಗಳು ಪ್ರತಿ ವರ್ಷ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾವಿರಾರು ಕಿ.ಮೀ. ವಲಸೆ ಹೋಗಿ ಮೊಟ್ಟೆಯಿಡಲು ಸೂಕ್ತ ಸ್ಥಳ ಹುಡುಕುತ್ತವೆ. ಈ ವೇಳೆ ಉಂಟಾಗುವ ಅಂತರವು ವಿಚ್ಛೇದನಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. (ಏಜೆನ್ಸೀಸ್)