ನ್ಯೂಸ್

ಶ್ರೀನಿ 'ಬೀರ್​ಬಲ್'​ ಯೂನಿವರ್ಸ್​ನಲ್ಲಿ ಸ್ಟಾರ್​ಗಳ ಸಮಾಗಮ! ಸ್ಯಾಂಡಲ್​ವುಡ್​ಗೆ ಬಹುಭಾಷಾ ನಟಿ ಕಮ್​ಬ್ಯಾಕ್ | Birbal 2

ಮೋಹನ್​ ಶೆಟ್ಟಿ

​ಬೆಂಗಳೂರು: ಕನ್ನಡದಲ್ಲಿ 'ಬೀರ್​ಬಲ್​' ಟ್ರಯೋಲಜಿ ಸಿನಿಮಾ ಮೂಲಕ ಕ್ರೈಮ್​-ಥ್ರಿಲ್ಲರ್ ಕಥಾಹಂದರವನ್ನು ಸಿನಿಪ್ರೇಕ್ಷಕರ ಮುಂದಿಟ್ಟಿದ್ದ ನಿರ್ದೇಶಕ, ನಟ ಶ್ರೀನಿ, ಇದೀಗ ಚಿತ್ರದ ಮುಂದುವರಿದ ಭಾಗವನ್ನು (Birbal 2) ತೆರೆಗೆ ತರುವಲ್ಲಿ ಸಖತ್ ಬಿಜಿಯಾಗಿದ್ದಾರೆ. 'ಕಾಂತಾರ' ಬೆಡಗಿ ರುಕ್ಮಿಣಿ ವಸಂತ್ ಅವರನ್ನು ಬೀರ್​ಬಲ್​ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ ಶ್ರೀನಿ, ಸದ್ಯ ಸ್ವೀಕ್ವೆಲ್​​ನಲ್ಲಿ ಸ್ಟಾರ್​ಗಳ ಸಮಾಗಮಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ ಅನಿಸುತ್ತಿದೆ.

ಈ ವರ್ಷದ ಜುಲೈನಲ್ಲಿ 'ಬೀರ್​ಬಲ್​ 2' ಚಿತ್ರೀಕರಣ ಪ್ರಾರಂಭಿಸಿದ ಶ್ರೀನಿ, ಶೂಟಿಂಗ್​ನ ಕೊನೆಯ ಹಂತಕ್ಕೆ ತಲುಪಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್​ನಲ್ಲಿ ಮೂಡಿಬರಲಿರುವ ಚಿತ್ರವನ್ನು ಶ್ರೀನಿ ಅವರೇ ನಟಿಸಿ, ನಿರ್ದೇಶಿಸಿದ್ದಾರೆ. ಲಾಯರ್​ ಪಾತ್ರದಲ್ಲಿ ಕೇಸ್ ಬಗೆಹರಿಸಲಿರುವ ಶ್ರೀನಿ, ಬಹುಭಾಷಾ ತಾರೆಯನ್ನು ಮತ್ತೇ ಸ್ಯಾಂಡಲ್​ವುಡ್​ಗೆ ಕರೆತರುತ್ತಿರುವುದು ಚಿತ್ರದ ದೊಡ್ಡ ಹೈಲೈಟ್​ ಎಂದೇ ಹೇಳಬಹುದು.

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಅಭಿನಯಿಸಿರುವ ನಟಿ ಖುಷ್ಬೂ ಸುಂದರ್, ಕನ್ನಡದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ 'ರಣಧೀರ', 'ಯುದ್ಧಕಾಂಡ' ಮತ್ತು 'ಅಂಜದ ಗಂಡು' ಸೇರಿದಂತೆ ಒಂದಷ್ಟು ಸೂಪರ್​ಹಿಟ್​ ಚಿತ್ರಗಳಲ್ಲಿ ಮಿಂಚಿದ್ದಾರೆ. ಇದೀಗ ಚಿತ್ರರಂಗದಿಂದ ದೂರ ಉಳಿದಿರುವ ಸ್ಟಾರ್​ ನಟಿಯನ್ನು ಮತ್ತೊಮ್ಮೆ ತಮ್ಮ ಸಿನಿಮಾ ಮೂಲಕ ಕನ್ನಡಕ್ಕೆ ಕರೆತರುತ್ತಿರುವ ಶ್ರೀನಿ, ನಟಿಯ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ. ​

ಇದರೊಟ್ಟಿಗೆ 'ರಾಮ ಶಾಮ ಭಾಮ', 'ಗಾಳಿಪಟ' ಖ್ಯಾತಿಯ ನಟಿ ಡೈಸಿ ಬೋಪಣ್ಣ ಕೂಡ 'ಬೀರ್​ಬಲ್​ 2' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್ ಮಾಡ್ತಿದ್ದಾರೆ. ಬಹುನಿರೀಕ್ಷಿತ ಸಿನಿಮಾದಲ್ಲಿ ಇನ್ನೂ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).