ನ್ಯೂಸ್

ಅಪಘಾತದಲ್ಲಿ ಯುವ ಪತ್ರಕರ್ತ ಬಸವರಾಜ್ ಸಾವು

ವಿಜಯನಗರ: ಹೊಸಪೇಟೆ ತಾಲೂಕಿನ ಮಲಪನಗುಡಿ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವ ಪತ್ರಕರ್ತ ಬಸವರಾಜ್ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಬಳ್ಳಾರಿ ಜಿಲ್ಲಾ ವರದಿಗಾರರಾಗಿ ಬಸವರಾಜ್ ಕೆಲಸ ಮಾಡುತ್ತಿದ್ದರು. ಸ್ನೇಹಿತ ಭಾಸ್ಕರ್ ಎಂಬುವವರ ಜತೆ ಹಂಪಿ ಸಮೀಪದ ಕಮಲಾಪುರಕ್ಕೆ ಬೈಕ್​ನಲ್ಲಿ ಬಸವರಾಜ್​ ತೆರಳುತ್ತಿದ್ದರು. ಮಾರ್ಗಮಧ್ಯೆ ಹೊಸಪೇಟೆ ತಾಲೂಕಿನ ಮಲಪನಗುಡಿ ಬಳಿ ಬೈಕ್​ ಸ್ಕಿಡ್​ ಆಗಿದ್ದು, ಬಸವರಾಜ್​ರ ತಲೆಗೆ ತೀವ್ರ ಪೆಟ್ಟಾಗಿತ್ತು. ಧಾರವಾಡದ ಎಸ್​ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಿಸದೆ ಬಸವರಾಜ್​ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಬಸವರಾಜ್ ಸ್ನೇಹಿತ ಭಾಸ್ಕರ್​ಗೆ ಚಿಕಿತ್ಸೆ ಮುಂದುವರಿದಿದೆ.