ನ್ಯೂಸ್

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ, 3 ವಾರಗಳಲ್ಲಿ 13ನೇ ಘಟನೆ

ಪಾಟ್ನಾ: ಬಿಹಾರದ ಸಹರ್ಸಾ ಜಿಲ್ಲೆಯ ಮಹಿಷಿ ಗ್ರಾಮದಲ್ಲಿ ಇಂದು (ಬುಧವಾರ) ಮತ್ತೊಂದು ಸೇತುವೆ ಕುಸಿದು ಬಿದ್ದಿದ್ದು, ಕೇವಲ ಮೂರು ವಾರಗಳಲ್ಲಿ ರಾಜ್ಯದಲ್ಲಿ ನಡೆದ 13ನೇ ದುರ್ಘಟನೆ ಇದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಇದೊಂದು ಸಣ್ಣ ಸೇತುವೆ ಆಗಿದ್ದು, ಸುತ್ತಮುತ್ತಲಿನ ಹಳ್ಳಿಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ (ಸಹರ್ಸ) ಜ್ಯೋತಿ ಕುಮಾರ್ ತಿಳಿಸಿದ್ದಾರೆ.

ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿನ ಸೇತುವೆ ಕುಸಿತದ ಸರಣಿ ಘಟನೆಗಳು ಸಂಭವಿಸಿದ್ದು, ಬಿಹಾರ ಸರ್ಕಾರ 15 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳೆದ ವಾರ ರಾಜ್ಯದ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ ತಕ್ಷಣ ದುರಸ್ತಿ ಮಾಡಬೇಕಾದ ಸೇತುವೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.