ಪಟನಾ: ಬಿಹಾರ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಇವೆ. ಆಡಳಿತಾರೂಢ ಎನ್ಡಿಎಯಲ್ಲಿ ಜೆಡಿಯುಗೆ ಸಿಕ್ಕ 122 ಸೀಟುಗಳ ಪೈಕಿ 7 ಸ್ಥಾನಗಳು ಜಿತನ್ ರಾಮ್ ಮಾಂಜಿಯವರ ಹಿಂದುಸ್ಥಾನ್ ಅವಾಮ್ ಮೋರ್ಚಾ (ಎಚ್ಎಎಂ)ಗೆ ಸಿಕ್ಕಿದೆ. ಈಗಾಗಲೇ ಏಳು ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಮಾಂಜಿ ಬಿಡುಗಡೆ ಮಾಡಿದ್ದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸೀಟು ಹಂಚಿಕೆ ವಿಚಾರ ಪ್ರಕಟಿಸಿದ್ದಾರೆ. ಇದೇ ವೇಳೆ, ಬಿಜೆಪಿಗೆ ಹಂಚಿಕೆಯಾಗಿರುವ 121 ಸೀಟುಗಳ ಪೈಕಿ ಕೆಲವನ್ನು ತಮಗೆ ನೀಡಬೇಕು ಎಂದು ವಿಕಾಸ್ಶೀಲ್ ಇನ್ಸಾನ್ ಪಾರ್ಟಿ ನಾಯಕರು ಕೇಳಿಕೊಂಡಿದ್ದಾರೆ. ಈ ಸಂಬಂಧ ಮಾತುಕತೆ ಮುಂದುವರಿದಿದೆ. ಅಕಸ್ಮಾತ್ ಅದು ಫಲಪ್ರದವಾದರೆ ಸೀಟು ಹಂಚಿಕೆ ವಿವರ ಬಹಿರಂಗವಾಗಲಿದೆ ಎಂದು ನಿತೀಶ್ ತಿಳಿಸಿದ್ದಾರೆ.
ಬಿಹಾರದ ಮಟ್ಟಿಗೆ ಲೋಕಜನ ಶಕ್ತಿ ಪಾರ್ಟಿ (ಎಲ್ಜೆಪಿ) ಎನ್ಡಿಎಯಿಂದ ಹೊರಬಿದ್ದಿದ್ದು, ಜೆಡಿಯು ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದೆ. ಇಂದು ಬೆಳಗ್ಗೆ ಬಿಜೆಪಿಯ ಬಿಹಾರ ರಾಜ್ಯ ಅಧ್ಯಕ್ಷ ಭೂಪೇಂದ್ರ ಯಾದವ್ ಮತ್ತು ಪಕ್ಷದ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನಾವೀಸ್ ಮತ್ತು ಹಿರಿಯ ನಾಯಕರು ನಿತೀಶ್ ಕುಮಾರ್ ನಿವಾಸದಲ್ಲಿ ಕೆಲಹೊತ್ತು ಸಭೆ ನಡೆಸಿದ್ದರು. ಮೂರು ಹಂತಗಳ ಮತದಾನದ ಪೈಕಿ ಅಕ್ಟೋಬರ್ 28ರಂದು ಮೊದಲ ಹಂತದ ಮತದಾನ ನಡೆಯಲಿದೆ. (ಏಜೆನ್ಸೀಸ್)