ನ್ಯೂಸ್

ಶಿಕ್ಷಕರ ಅರ್ಹತಾ ಪರೀಕ್ಷೆ: ನಕಲಿ ಅಭ್ಯರ್ಥಿಗಳ ಬಂಧನ!

ದರ್ಭಂಗಾ (ಬಿಹಾರ): ದರ್ಭಂಗಾ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)-2024 ಬರೆಯುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ 12 ಜನರನ್ನು ಬಿಹಾರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಲಹೇರಿಯಾಸರಾಯ್​ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಕೇಂದ್ರಗಳಿಂದ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ಸಾದರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರದಿಂದ ಬಂಧಿಸಲಾಗಿದೆ. ಹಾಗೂ ಬಹದ್ದೂರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರದಿಂದ ಒಬ್ಬರನ್ನು ಬಂಧಿಸಲಾಗಿದೆ ಎಂದು ದರ್ಭಂಗಾ ಪೊಲೀಸ್​ ವರಿಷ್ಠಾಧಿಕಾರಿ ಜಗುನಾಥ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಬಯೋಮೆಟ್ರಿಕ್ ಬೆರಳಚ್ಚನ್ನು ಸ್ಕ್ಯಾನ್ ಮಾಡಿದ ಸಂದರ್ಭ, ನಕಲಿ ಅಭ್ಯರ್ಥಿಗಳು ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರೀಕ್ಷಾ ಮೇಲ್ವಿಚಾರಕರು ನೀಡಿದ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಬಂಧಿತರು ಯಾವುದೇ ಅಂತರರಾಜ್ಯ ವಂಚನೆ ಸಿಂಡಿಕೇಟ್‌ಗೆ ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆಯೂ ಅವರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.