ನ್ಯೂಸ್

ಬಿಹಾರ ಚುನಾವಣೆ: SIR ಮೂಲಕ ಕೇಂದ್ರ ಸರ್ಕಾರ ಬಡವರ ಮತಗಳನ್ನು ಕದಿಯಲು ಪ್ರಯತ್ನಿಸುತ್ತಿದೆ ಎಂದ ರಾಹುಲ್ ಗಾಂಧಿ| Rahul Gandhi

Rahul Gandhi: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಕೇಂದ್ರ ಸರ್ಕಾರವು ಬಡವರ ಮತಗಳನ್ನು ಕದಿಯಲು ಪ್ರಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾನುವಾರ (ಆಗಸ್ಟ್​,24) ಆರೋಪಿಸಿದ್ದಾರೆ.

ಮತದಾರ ಅಧಿಕಾರ ಯಾತ್ರೆಯ ಭಾಗವಾಗಿ ಬಿಹಾರದ ಅರಾರಿಯಾದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಗಾಂಧಿ, SIR ಪ್ರಕ್ರಿಯೆಯು ಚುನಾವಣಾ ಆಯೋಗದ ಬೆಂಬಲದೊಂದಿಗೆ ನಡೆಸಲಾದ ಮತಗಳನ್ನು ಕದಿಯಲು ಸಾಂಸ್ಥಿಕ ವಿಧಾನ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ಸಾರ್ವಜನಿಕ ವಲಯದ ಘಟಕಗಳನ್ನು ಖಾಸಗೀಕರಣಗೊಳಿಸಿದ ನಂತರ ನರೇಂದ್ರ ಮೋದಿ ಸರ್ಕಾರವು ಈಗ ಚುನಾವಣಾ ಆಯೋಗದ ಸಹಾಯದಿಂದ ಎಸ್‌ಐಆರ್ ಮೂಲಕ ಬಡವರ ಮತಗಳನ್ನು ಕದಿಯಲು ಬಯಸುತ್ತಿದೆ ಎಂದು ಟೀಕಿಸಿದ್ದಾರೆ.

ಮುಂದುವರೆದು ಮಾತನಾಡಿದ ವಿಪಕ್ಷ ನಾಯಕ, ಚುನಾವಣಾ ಆಯೋಗದ ಬದಲು ಚುನಾವಣಾ ಲೋಪ ಎಂದು ಬಣ್ಣಿಸಿದ್ದಾರೆ. ಈ ಕ್ರಮವು ಸಂವಿಧಾನಬಾಹಿರವಾಗಿದೆ ಮತ್ತು ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸಮಾಜದ ಕೊನೆಯನಲ್ಲಿರುವ ವರ್ಗಗಳ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಇಂಡಿಯಾ ಕೂಟವು ಬಿಹಾರ ಚುನಾವಣೆಯಲ್ಲಿ ಅನ್ಯಾಯ ಸಂಭವಿಸಲು ಬಿಡುವುದಿಲ್ಲ. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದು ರಾಹುಲ್​ ಹೇಳಿದ್ದಾರೆ. ಎಸ್‌ಐಆರ್ ಸಾಂವಿಧಾನಿಕ ವಿರೋಧಿಯಾಗಿದೆ. ಇದಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಜನರು ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಗಾಂಧಿ ತಿಳಿಸಿದ್ದಾರೆ.

ಬಡವರು ಮತ್ತು ಯುವಕರಿಗೆ ಎಲ್ಲಾ ಉದ್ಯೋಗ ಅವಕಾಶಗಳನ್ನು ಮೋದಿ ಸರ್ಕಾರ ಸ್ಥಗಿತಗೊಳಿಸಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು. ಸಾರ್ವಜನಿಕ ವಲಯದ ಉದ್ಯಮಗಳ ದೊಡ್ಡ ಪ್ರಮಾಣದ ಖಾಸಗೀಕರಣದ ನಂತರ, ಕೇಂದ್ರವು ಈಗ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಗಾಂಧಿ ಆರೋಪಿಸಿದ್ದಾರೆ.

ಆಗಸ್ಟ್ 17 ರಂದು ಸಸಾರಂನಿಂದ ಪ್ರಾರಂಭವಾದ ಮತದಾರ ಅಧಿಕಾರ ಯಾತ್ರೆಯೂ 16 ದಿನಗಳಲ್ಲಿ 20 ಕ್ಕೂ ಹೆಚ್ಚು ಜಿಲ್ಲೆಗಳನ್ನು ಕ್ರಮಿಸಲಿದೆ. ಇದು ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ನಡೆಯುವ ಮೆಗಾ ರ್‍ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ.(ಏಜೆನ್ಸೀಸ್)