ನ್ಯೂಸ್

ಬಿಹಾರ ಚುನಾವಣೆ | ಎಲ್​ಜೆಪಿ ಇಲ್ಲದ ಎನ್​ಡಿಎಯಲ್ಲಿ 50:50 ಸೀಟು ಹಂಚಿಕೆ ?

ಪಟನಾ: ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ, ಬಿಹಾರ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಅಂತಿಮಗೊಳಿಸಿವೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆಯೂ ಆಗಲಿದೆ. ಎನ್​ಡಿಎ ಮೈತ್ರಿಕೂಟದಿಂದ ಲೋಕಜನಶಕ್ತಿ ಪಕ್ಷ (ಎಲ್​ಜೆಪಿ) ಬಿಹಾರದ ಮಟ್ಟಿಗೆ ಹೊರ ಹೋಗಿದ್ದು, ಒಂಟಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ.

ಹೀಗಾಗಿ, 243 ವಿಧಾನಸಭಾ ಕ್ಷೇತ್ರಗಳಲ್ಲಿ 50-50 ಲೆಕ್ಕಾಚಾರದಂತೆ ಜೆಡಿಯುಗೆ 122 ಹಾಗೂ ಬಿಜೆಪಿಗೆ 121 ಸ್ಥಾನಗಳು ಸಿಗಲಿವೆ. ಜಿತನ್ ರಾಮ್ ಮಾಂಜಿಯವರ ಹಿಂದುಸ್ತಾನಿ ಅವಾಮ್ ಮೋರ್ಚಾಗೆ ಜೆಡಿಯು ಕೋಟಾದಿಂದ ಕ್ಷೇತ್ರಗಳು ಸಿಗಲಿವೆ. ಮತ್ತೊಂದು ಮಿತ್ರ ಪಕ್ಷ ಎಲ್​ಜೆಪಿಗೆ ಬಿಜೆಪಿ ಕೆಲ ಕ್ಷೇತ್ರಗಳನ್ನು ಬಿಟ್ಟುಕೊಡಲಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ನಾಯಕರು ಕೇಂದ್ರ ಚುನಾವಣಾ ಸಮಿತಿ ಜತೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಸಂಜೆ ಸಭೆ ನಡೆಸಿದ್ದರು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಷಾ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ಗೃಹ ಇಲಾಖೆ ರಾಜ್ಯ ಸಚಿವ ನಿತ್ಯಾನಂದ್ ರೈ ಮತ್ತು ಬಿಹಾರದ ಉಸ್ತುವಾರಿ ಭೂಪೇಂದರ್ ಯಾದವ್ ಸಭೆಯಲ್ಲಿ ಇದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.