Patna: ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) ಇನ್ನು ಐದು ದಿನ ಬಾಕಿ ಉಳಿದಿದ್ದು, ಏಟು, ತಿರುಗೇಟುಗಳ ಅಬ್ಬರ ಜೋರಾಗಿವೆ. ಶುಕ್ರವಾರ ಎನ್‌ಡಿಎ ಬಿಡುಗಡೆಗೊಳಿಸಿದ ಪ್ರಣಾಳಿಕೆಯನ್ನು ವ್ಯಂಗ್ಯವಾಡಿರುವ ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಇದು ಸುಳ್ಳು ವಂಚನೆಯ ವರದಿ ಎಂದಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ತೇಜಸ್ವಿ, ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಅಧಿಕಾರ ನಡೆಸಿರುವ ಎನ್‌ಡಿಎ, ತಾನು ಮಾಡಿರುವ ಸುಳ್ಳು, ವಂಚನೆ ಮತ್ತು ಪೊಳ್ಳು ಭರವಸೆಗಳ ವರದಿಯಾಗಿದ್ದು, ರಾಜ್ಯದ 14 ಕೋಟಿ ಜನರಿಗೆ ಸಂಕಲ್ಪ ಪತ್ರದ ಬದಲು, ಕ್ಷಮಾ ಪತ್ರವನ್ನು ತರುವಂತೆ ಸಲಹೆ ನೀಡಿದರು.
ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಣಾಳಿಕೆಯನ್ನು ಕೇವಲ 26 ಸೆಕೆಂಡುಗಳಲ್ಲಿ ಬಿಡುಗಡೆ ಮಾಡಲಾಯಿತು. ಎನ್‌ಡಿಎ ಬಿಹಾರಕ್ಕೆ ಕ್ಷಮಾ ಪತ್ರವನ್ನು ನೀಡಬೇಕು, ಸಂಕಲ್ಪ ಪತ್ರವನ್ನಲ್ಲ. ಎನ್‌ಡಿಎ ಮೈತ್ರಿಕೂಟದ ಪ್ರಣಾಳಿಕೆಯು 20 ವರ್ಷಗಳಿಂದ ರಾಜ್ಯದ ಜನತೆಗೆ ಹೇಳಿಕೊಂಡು ಬರುತ್ತಿರುವ ಸುಳ್ಳುಗಳು, ವಂಚನೆ ಮತ್ತು ಖಾಲಿ ಭರವಸೆಗಳ ವರದಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಹೊಸ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ, ಆದರೆ ಅಧಿಕಾರಕ್ಕೆ ಬರುತಿದ್ದಂತೆ ಅವುಗಳನ್ನು ಈಡೇರಿಸಲು ಮರೆತುಬಿಡುತ್ತದೆ, ಜನರು ತಮ್ಮ ಹೊಸ ಭರವಸೆಗಳನ್ನು ನಿರೀಕ್ಷಿಸುತ್ತಾರೆ ಎಂದು ಹೇಳಿದರು.
ಎನ್‌ಡಿಎ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರದಲ್ಲಿ ಒಂದು ಕೋಟಿ ಉದ್ಯೋಗಗಳು, ಜಾಗತಿಕ ಕೌಶಲ್ಯ ಕೇಂದ್ರ, ಮಹಿಳಾ ಸಬಲೀಕರಣಕ್ಕಾಗಿ ಲಖ್ಪತಿ ದೀದಿಗಳು ಮತ್ತು ಮಿಷನ್ ಕರೋಡ್‌ಪತಿ ಯೋಜನೆಗಳು, ಅತ್ಯಂತ ಹಿಂದುಳಿದ ವರ್ಗಗಳ (ಇಬಿಸಿ) ಉನ್ನತಿಗಾಗಿ ಅನೇಕ ಯೋಜನೆಗಳು, ರೈತರ ಕಲ್ಯಾಣಕ್ಕಾಗಿ ಕಿಸಾನ್ ಸಮ್ಮಾನ್ ನಿಧಿ, ಬಡವರಿಗೆ ಪಂಚಾಮೃತ ಖಾತರಿ ಮತ್ತು ಬಡ ಕುಟುಂಬಗಳ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಇತರ ಭರವಸೆಗಳನ್ನು ನೀಡಿತು.
ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮಧ್ಯಾಹ್ನದ ಊಟವನ್ನು ಒದಗಿಸುವ ಎನ್‌ಡಿಎ ಭರವಸೆಯನ್ನು ಅಪಹಾಸ್ಯ ಮಾಡಿದ ತೇಜಸ್ವಿ, ಕಳೆದ 20 ವರ್ಷಗಳ ಕಾಲ ಆಡಳಿತ ನೀಡಿದ ನಿತೀಶ್ ಕುಮಾರ್, ಈ ಯೋಜನೆಯನ್ನು ಏಕೆ ಜಾರಿಗೆ ತರಲಿಲ್ಲ..?, ಅವರು ಶಾಲೆಗಳನ್ನು ಪುನರುಜ್ಜೀವನಗೊಳಿಸುವುದಾಗಿ ಹೇಳುತ್ತಿದ್ದಾರೆಯೇ? ಅಂದರೆ, ಎರಡು ದಶಕಗಳಲ್ಲಿ ಇದನ್ನೆಲ್ಲಾ ಮಾಡಲು ಸಾಧ್ಯವಾಗಲಿಲ್ಲವೆ..? ಎಂದು ಪ್ರಶ್ನಿಸಿದ ಆರ್ಜೆಡಿ ನಾಯಕ, ಈ ಎಲ್ಲ ವೈಫಲ್ಯಗಳಿಗೆ ಸರ್ಕಾರ ಬಿಹಾರದ ಜನರ ಕ್ಷಮೆ ಕೇಳಬೇಕು ಎಂದರು.
ಇದೇ ವಿಷಯವಾಗಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ತೇಜಸ್ವಿ ಯಾದವ್, ಎನ್‌ಡಿಎ ಮೈತ್ರಿಕೂಟದ ಪ್ರಣಾಳಿಕೆಯನ್ನು ಆತುರದಲ್ಲಿ ಸಿದ್ಧಗೊಳಿಸಲಾಗಿದ್ದು, ಅದು ತುಂಬಾ ಕೆಟ್ಟದಾಗಿದೆ, ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ, ಸ್ವತಃ ಮುಖ್ಯಮಂತ್ರಿಗಳನ್ನೆ ಮಾತನಾಡದಂತೆ ತಡೆಯಲಾಗಿದೆ ಎಂದು ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್‌ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)