Nitish Kumar : ಬಿಹಾರದ ಮದರಸಾ ಶಿಕ್ಷಕರಿಗಾಗಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ಗುರುವಾರ (ಆ.21) ಭಾಗಿಯಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅನ್ಯ ಧರ್ಮಿಯ(ಮುಸ್ಲಿಂ) ಟೋಪಿಯನ್ನು ಧರಿಸಲು ನಿರಾಕರಿಸಿರುವುದು ಭಾರೀ ವೈರಲ್ ಆಗಿದೆ.
ಪಾಟ್ನಾದಲ್ಲಿ ನಡೆದ ಬಿಹಾರ ಮದರಸಾ ಶಿಕ್ಷಣ ಮಂಡಳಿಯ ಶತಮಾನೋತ್ಸವದಲ್ಲಿ ಭಾಗಿಯಾಗಿದ್ದ ವೇಳೆ, ಸಚಿವ ಜಮಾ ಖಾನ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತಲೆಯ ಮೇಲೆ ಸಾಂಪ್ರದಾಯಿಕ ಟೋಪಿ ಹಾಕುವ ಮೂಲಕ ಗೌರವಿಸಲು ಬಯಸಿದ್ದರು. ಆದರೆ, ಮುಖ್ಯಮಂತ್ರಿಗಳು ನಯವಾಗಿ ನಗುತ್ತಾ ಅದನ್ನು ಧರಿಸಲು ನಿರಾಕರಿಸಿ, ಶಾಲನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ಸಂದರ್ಭದಲ್ಲಿ ನಿತೀಶ್ ಕುಮಾರ್ ತಮ್ಮ ಸರ್ಕಾರ ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಭವಿಷ್ಯದಲ್ಲಿ ನಿರಂತರ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಈ ಕಾರ್ಯಕ್ರಮ ಹೆಚ್ಚಿನ ಜನಸಮೂಹವನ್ನು ಸೆಳೆದಿದ್ದು, ಮತ್ತೆ 2025 ರಲ್ಲಿ ಅಧಿಕಾರಕ್ಕೆ ಮರಳುತ್ತಾರೆ ಎಂದು ಘೋಷಣೆಗಳನ್ನು ಕೂಗಿದರು. ಇದನ್ನೂ ಓದಿ: ಕೆಎಸ್‌ಒಯುನಿಂದ ಮನೆಗೊಂದು ಕಡ್ಡಾಯ ಪದವಿ ಅಭಿಯಾನ
ಮದರಸಾ ಮಂಡಳಿಯ ಶತಮಾನೋತ್ಸವದ ಅಂಗವಾಗಿ ಪಟ್ನಾದ ಬಾಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮದರಸಾ ಶಿಕ್ಷಕರು ಮತ್ತು ಸಮುದಾಯದ ಸದಸ್ಯರು ಮುಖ್ಯಮಂತ್ರಿಗೆ ಅರ್ಜಿಗಳನ್ನು ಸಲ್ಲಿಸಲು ಪ್ರಯತ್ನಿಸಿದರು. ಆದರೆ, ಅಧಿಕಾರಿಗಳು ಆರಂಭದಲ್ಲಿ ತಡೆದರು ಇದು ಸಭೆಯಲ್ಲಿ ಗದ್ದಲವನ್ನುಂಟು ಮಾಡಿತ್ತು. ಇದನ್ನು ಗಮನಿಸಿದ ನಿತೀಶ್ಕುಮಾರ್ ತಾವೇ ಸ್ವತಃ ಜನರನ್ನು ಸಂಪರ್ಕಿಸಿ ಅವರಿಂದ ಅರ್ಜಿಗಳನ್ನು ಪಡೆದುಕೊಂಡರು.
ಅರ್ಜಿಗಳನ್ನು ಪರಿಶೀಲಿಸಿದ ನಂತರ, ಮುಖ್ಯಮಂತ್ರಿಗಳು ಅವುಗಳನ್ನು ತಮ್ಮ ಅಧಿಕಾರಿಗಳಿಗೆ ಹಸ್ತಾಂತರಿಸಿ, ಕುಂದು ಕೊರತೆಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು. (ಏಜೆನ್ಸೀಸ್)