ಕೆಎಸ್‌ಒಯುನಿಂದ ಮನೆಗೊಂದು ಕಡ್ಡಾಯ ಪದವಿ ಅಭಿಯಾನ

SRP_20-01jpj
Published on

ಶ್ರೀರಂಗಪಟ್ಟಣ: ಶಿಕ್ಷಣದಲ್ಲಿ ಪದವಿ ಪಡೆಯಲು ಆಸಕ್ತಿ ಇದ್ದು ಸಹ ಕಾರಣಾಂತರಗಳಿಂದ ಸಾಧ್ಯವಾಗದ ಗೃಹಿಣಿಯರು, ಕೆಲಸಕ್ಕೆ ತೆರಳುವ ಹಾಗೂ ಸ್ವಾವಲಂಬಿ ಬದುಕು ಕಂಡ ಎಷ್ಟೋ ಮಹಿಳೆಯರು ಉನ್ನತ ವ್ಯಾಸಂಗ ಮಾಡಲು ರಾಜ್ಯ ಮುಕ್ತ ವಿಶ್ವವಿದ್ಯಾಲಯ ಉತ್ತಮ ಅವಕಾಶ ಕಲ್ಪಿಸಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಜಿಲ್ಲಾ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಮಿಲನಾ ಹೊಸಳ್ಳಿ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮತ್ತು ಮಂಡ್ಯದ ಅನನ್ಯ ಹಾರ್ಟ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಕಡ್ಡಾಯ ಪದವಿ ಅಭಿಯಾನ ಮತ್ತು ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಮೊದಲ ಬಾರಿಗೆ ಮನೆಗೊಂದು ಕಡ್ಡಾಯ ಪದವಿ ಅಭಿಯಾನ ಹಮ್ಮಿಕೊಂಡಿರುವುದು ಸಂತಸದ ಸಂಗತಿಯಾಗಿದೆ. ಕೆಎಸ್‌ಒಯುನ ಮೂಲ ಆಶಯದಂತೆ ಉನ್ನತ ಶಿಕ್ಷಣ ಮನೆ ಬಾಗಿಲಿಗೆ ತಲುಪುವ ದೃಷ್ಟಿಯಿಂದ ಪ್ರತಿ ಮನೆಯ ಬಾಗಿಲಿಗೆ ಖುದ್ದು ಸಹೋದ್ಯೋಗಿಗಳೊಂದಿಗೆ ಭೇಟಿ ನೀಡಿ ವಿಶ್ವವಿದ್ಯಾಲಯ ಅತ್ಯಂತ ಕಡಿಮೆ ದರದಲ್ಲಿ ಪದವಿಯಿಂದ, ಯುಜಿಸಿ, ಪಿ.ಜಿ., ಪಿಎಚ್.ಡಿವರೆಗೆ ನೀಡುವ ಎಲ್ಲ ಶಿಕ್ಷಣ ಕ್ರಮಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಆಟೋ, ಗೂಡ್ಸ್, ಎಲ್ಲ ಬೃಹತ್ ಹಾಗೂ ಸಣ್ಣ-ಪುಟ್ಟ ವಾಹನಗಳು, ಸಾರಿಗೆ ಸಂಸ್ಥೆ ಚಾಲಕರು, ಅವರ ಕುಟುಂಬಸ್ಥರು, ಶ್ರಮಿಕವರ್ಗ ಸೇರಿದಂತೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಶುಲ್ಕದಲ್ಲಿ ಶೇ.10 ರಿಯಾಯಿತಿ ಹಾಗೂ ತೃತಿಯ ಲಿಂಗಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ಲಭ್ಯವಿದೆ ಎಂದರು.

ಮಂಡ್ಯ ಅನ್ಯನ್ಯ ಹಾರ್ಟ್ಸ್ ಸಂಸ್ಥಾಪಕಿ ಬಿ.ಎಸ್.ಅನುಪಮಾ ಮಾತನಾಡಿ, ಸಾಕಷ್ಟು ಸಂಖ್ಯೆಯ ಬಡ, ಮಧ್ಯಮ ವರ್ಗದ ಹೆಣ್ಣು ಮಕ್ಕಳು ಕೌಟುಂಬಿಕ ಕಾರಣಗಳು ಹಾಗೂ ತಮ್ಮ ಮನೆಯ ಪರಿಸ್ಥಿತಿಗಳಿಗೆ ಸೋತು ಶಿಕ್ಷಣವನ್ನು ಅರ್ಧಕ್ಕೆ ಕಡಿತಗೊಳಿಸಿರುವ ಹಲವು ಉದಾಹರಣೆಗಳಿವೆ. ಆದರೆ ಉನ್ನತ ಶಿಕ್ಷಣ ಪಡೆಯುವುದು ಈಗ ಸರಳವಾಗಿದ್ದು, ಮನೆಯಲ್ಲೇ ಕುಳಿತು ಅಥವಾ ದುಡಿಯುವ ಕಾರ್ಯ ಕ್ಷೇತ್ರದಲ್ಲಿ ಸಿಗುವ ಕಡಿಮೆ ಸಮಯವನ್ನು ಬಳಸಿಕೊಂಡು ವಿದ್ಯಾಭ್ಯಾಸ ಕಲಿತು ನಿಮ್ಮ ಆಸೆ ಈಡೇರಿಸಿಕೊಳ್ಳುವ ಜತೆಗೆ ಸಮಾಜದಲ್ಲಿ ಶೈಕ್ಷಣಿಕ ಸಾಧನೆ ಮಾಡುವ ಗುರಿ ಹೊಂದಬಹುದಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವಿವಿಧ ಬಡಾವಣೆಗಳ ಮನೆ ಮನೆಗಳ ಬಾಗಿಲು ಹಾಗೂ ಅಂಗಡಿಗಳ ಬಳಿ ಸ್ವತಃ ತೆರಳಿದ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣ ಹಾಗೂ ಅನುಕೂಲಗಳ ಕುರಿತು ಪ್ರಾದೇಶಿಕ ವಿಭಾಗದ ಅಧಿಕಾರಿಗಳು ಮಹಿಳೆಯರಿಗೆ ಮಾಹಿತಿ ನೀಡಿ ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವ ಕೆಲಸ ನಿರ್ವಹಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆಯೊಂದಿಗೆ ಶ್ಲಾಘನೆ ವ್ಯಕ್ತವಾಯಿತು.

ಪ್ರಾದೇಶಿಕ ಕೇಂದ್ರದ ಸೂಪರಿಂಟೆಂಡೆಂಟ್ ವೆಂಕಟರಾಮು, ಕಿತ್ತೂರು ರಾಣಿ ಚನ್ನಮ್ಮ ಪುರಸ್ಕೃತ ಆಶಾಲತಾ ಪುಟ್ಟೇಗೌಡ, ಐಕ್ಯ ಅಲೆಯನ್ಸ್ ಸಂಸ್ಥೆಯ ಅಧ್ಯಕ್ಷೆ ಲಯನ್ ಸರಸ್ವತಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net