ಜೈಪುರ: ಭಾರತ ಮತ್ತು ಅಮೆರಿಕ ಸೇನೆಗಳ ನಡುವಿನ 20ನೇ ಆವೃತ್ತಿಯ ಸೇನಾ ಜಂಟಿ ಸಮರಾಭ್ಯಾಸ 'ಯುದ್ಧ್ ಅಭ್ಯಾಸ 2024' ರಾಜಸ್ಥಾನದ ಪಶ್ಚಿಮ ವಲಯದಲ್ಲಿರುವ ಮಹಾನ್ ಫೀಲ್ಡ್ ಫೈರಿಂಗ್ ರೇಂಜಸ್ನಲ್ಲಿ ಸೋಮವಾರ ಪ್ರಾರಂಭವಾಗಿದೆ.
ಭಾರತ ಮತ್ತು ಅಮೆರಿಕದ ಒಟ್ಟು 1,200 ಸೈನಿಕರು ಈ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ 10:30ರ ಸುಮಾರಿಗೆ ಪಥಸಂಚಲನದೊಂದಿಗೆ ಸೇನಾ ಸಮರಾಭ್ಯಾಸ ಆರಂಭಗೊಂಡಿತು. ಈ ಆವೃತ್ತಿಯು ಸೈನ್ಯದ ಶಕ್ತಿಯನ್ನು ಸೂಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
600 ಸಿಬ್ಬಂದಿಯನ್ನು ಒಳಗೊಂಡಿರುವ ಭಾರತೀಯ ಸೇನಾ ತುಕಡಿಯನ್ನು ರಜಪೂತ್ ರೆಜಿಮೆಂಟ್‍ನ ಬೆಟಾಲಿಯನ್ ಮತ್ತು ಇತರ ಶಸ್ತ್ರಾಸ್ತ್ರ ಪಡೆಗಳ ಸಿಬ್ಬಂದಿ ಭಾಗವಹಿಸಲಿದ್ದಾರೆ.
ಈ ಸಮಾರಭ್ಯಾಸ ಎರಡೂ ರಾಷ್ಟ್ರಗಳ ಸೇನೆಗಳ ನಡುವೆ ರಕ್ಷಣಾ ಸಹಕಾರ ಹೆಚ್ಚಸಲಿದೆ. ಉಭಯ ದೇಶಗಳ ನಡುವಿನ ಯುದ್ಧತಾಂತ್ರಿಕ ಸಹಭಾಗಿತ್ವ ವೃದ್ಧಿಗೆ ಸಹಕಾರಿಯಾಗಲಿದೆ. ಯುದ್ಧದ ಹೊಸ ತಂತ್ರಗಳನ್ನು ಅರಿಯಲು ನೆರವಾಗುತ್ತದೆ ಎಂಬುದನ್ನು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ ಹೇಳಿದ್ದಾರೆ.
"ವಿಶ್ವಸಂಸ್ಥೆಯ ಆದೇಶದ ಅಡಿಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎರಡೂ ಕಡೆಯ ಜಂಟಿ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಅಭ್ಯಾಸದ ಗುರಿಯಾಗಿದೆ. ಎರಡೂ ದೇಶಗಳ ಸೈನಿಕರು ಜಂಟಿ ಕಾರ್ಯಾಚರಣೆಗಳನ್ನು ನಡೆಸಲು ತಂತ್ರಗಳನ್ನು ಪರಸ್ಪರ ಹಂಚಿಕೊಳ್ಳಲಿದ್ದಾರೆ. ಇದರಿಂದಾಗಿ ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ವೃದ್ಧಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಮರಾಭ್ಯಾಸ ಸೆಪ್ಟೆಂಬರ್ 22 ರವರೆಗೆ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ಭಾರತ ಮತ್ತು ಫ್ರಾನ್ಸ್ನ ವಾಯುಪಡೆಗಳು 2021ರಲ್ಲಿ ಐದು ದಿನಗಳ ಜಂಟಿ ಸಮರಾಭ್ಯಾಸ ನಡೆಸಿದ್ದವು.