ನ್ಯೂಸ್

BiggBoss Kannada S10: ತುಕಾಲಿ ಸಂತುಗೆ ಕಿಚ್ಚನ ಕ್ಲಾಸ್; ಪ್ರತಾಪ್​ಗೆ ಅವಕಾಶ ಬೇಕೆಂದ​ 'ಬಿಗ್​' ಮಂದಿ!

ಬೆಂಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್​ ನಡೆಸಿಕೊಡುತ್ತಿರುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ ಇದೀಗ 10ನೇ ಸೀಸನ್​ಗೆ ಕಾಲಿಟ್ಟಿದ್ದು, ಗ್ರ್ಯಾಂಡ್​ ಓಪನಿಂಗ್​ ಮೂಲಕ ಯಶಸ್ವಿಯಾಗಿ ಪ್ರಾರಂಭಗೊಂಡಿದೆ.

ಮನೆಗೆ ಎಂಟ್ರಿ ಕೊಟ್ಟು ಒಂದು ವಾರಗಳನ್ನು ಪೂರೈಸಿದ ಸ್ಪರ್ಧಿಗಳಿಗೆ ತಮ್ಮ ಸರಿ-ತಪ್ಪುಗಳನ್ನು ವಾರದ ಕಥೆ ಕಿಚ್ಚನ ಜತೆ ಕಾರ್ಯಕ್ರಮದ ಪಂಚಾಯತಿ ಕಟ್ಟೆಯಲ್ಲಿ ಅರ್ಥೈಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸುದೀಪ್​, ಸೀಸನ್​ 10ರ ಮೊದಲ ವಾರದ ಕಥೆಯಲ್ಲಿ ಸ್ಪರ್ಧಿಗಳಿಗೆ ತಪ್ಪುಗಳ ಬಿಸಿಯನ್ನು ಮುಟ್ಟಿಸಿದ್ದಾರೆ.

ವೀಕ್ಷಕರ ನಿರೀಕ್ಷೆಯಂತೆ ಹಾಗೂ ಈ ಮೊದಲೇ ತಿಳಿದಂತೆ ತುಕಾಲಿ ಸಂತೋಷ್​ ಹಾಸ್ಯದ ಭರಾಟೆಯಲ್ಲಿ ಡ್ರೋನ್​ ಪ್ರತಾಪ್​ಗೆ ಉಂಟು ಮಾಡಿದ ಬೇಸರದ ಬಗ್ಗೆ ಪಂಚಾಯತಿ ಕಟ್ಟೆಯಲ್ಲಿ ಕಿಚ್ಚ ಸುದೀಪ್​ ಯಾವ ರೀತಿ ಅರ್ಥೈಸಲಿದ್ದಾರೆ, ಹೇಗೆ ಕ್ಲಾಸ್​ ತೆಗೆದುಕೊಳ್ಳಲಿದ್ದಾರೆ ಎಂದು ಕಾಯುತ್ತಿದ್ದರು. ಇದಕ್ಕೆ ತಕ್ಕಂತೆ ಸುದೀಪ್​ ಎಂದಿನಂತೆ ತಮ್ಮ ಶೈಲಿಯಲ್ಲೇ ನೀಡಿದ ಖಡಕ್​ ಮಾತುಗಳಿಗೆ ವೀಕ್ಷಕರು ಫಿದಾ ಆಗಿದ್ದಾರೆ.

ಪ್ರಾರಂಭದಲ್ಲಿ ಸ್ಪರ್ಧಿಗಳ ನಡುವೆ ಮಾಡಲಾಗಿದ್ದ ಸಮರ್ಥರು ಮತ್ತು ಅಸಮರ್ಥರು ಎಂಬ ಎರಡು ತಂಡಗಳನ್ನು ಅಂತ್ಯಗೊಳಿಸಿದ ಸುದೀಪ್,​ ಬಳಿಕ ಹಲವು ಕುತೂಹಲಕಾರಿ ವಿಷಯಗಳನ್ನು ಮನೆಯ ಸದಸ್ಯರೊಂದಿಗೆ ಚರ್ಚಿಸಿದರು.

ಈ ಮಧ್ಯೆ ಪ್ರತಾಪ್​ ವಿಚಾರವನ್ನು ತೆಗೆದ ಸುದೀಪ್​, ಹಾಸ್ಯದ ಮೂಲಕ ಇನ್ನೊಬ್ಬರ ವ್ಯಕ್ತಿತ್ವ ಹತ್ಯೆಗೈಯುವ ಹಕ್ಕು ಯಾರು ಕೊಟ್ಟಿದ್ದು? ತಪ್ಪಲ್ವಾ ಸರ್ ಎಂದು ತುಕಾಲಿ ಸಂತೋಷ್​ಗೆ ಪ್ರಶ್ನಿಸಿದರು. ತದನಂತರ ತಪ್ಪು ಮಾಡಿದವರಿಗೆ ಎಲ್ಲಿ ಶಿಕ್ಷೆಯಾಗಬೇಕೋ ಅಲ್ಲಿ ಆಗುತ್ತದೆ. ದೇವರೇ ಕ್ಷಮಿಸುತ್ತಾನೆ ಅಂದಮೇಲೆ ನಾವು, ನೀವು ಯಾರು ಸರ್​? ಎಂದು ಖಡಕ್​ ಆಗಿ ಹೇಳಿದರು.

ಈ ಮಾತುಗಳನ್ನು ಮೌನದಿಂದಲೇ ಆಲಿಸಿದ ತುಕಾಲಿ ಸಂತೋಷ್​ ಬಳಿಕ ಸುದೀಪ್​ ಹಾಗೂ ಡ್ರೋನ್​ ಪ್ರತಾಪ್​ ಬಳಿ ಕ್ಷಮೆ ಕೋರಿದರು. ಸುದೀಪ್​ ಅವರ ಕ್ಲಾಸ್​ಗೆ ವೀಕ್ಷಕರು ಮತ್ತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್​ ಮಾಡಿದ್ದಾರೆ.