ನ್ಯೂಸ್

ಅರ್ಧ ಮನುಷ್ಯ ಇನ್ನರ್ಧ ಕೋತಿ! ಕ್ಯಾಮೆರಾದಲ್ಲಿ ನಿಗೂಢ ಜೀವಿ ಸೆರೆ, ಭಾರಿ ಚರ್ಚೆ ಹುಟ್ಟುಹಾಕಿದ ವೈರಲ್​ ವಿಡಿಯೋ​ | Bigfoot

ನವದೆಹಲಿ: ಬಿಗ್‌ಫೂಟ್ ( Bigfoot ) ಎಂಬ ನಿಗೂಢ ಜೀವಿ ಅಮೆರಿಕ ( America ) ದ ಕಾಡುಗಳಲ್ಲಿ ವಾಸಿಸುತ್ತಿದೆ ಎಂದು ಹೇಳಲಾದ ವಿಡಿಯೋವೊಂದು ವೈರಲ್ ಆಗಿದೆ. ಓಕ್ಲಹೋಮಾದ ವಿಚಿತಾ ಪರ್ವತಗಳ ಸಮೀಪವಿರುವ ಅರಣ್ಯದಲ್ಲಿ ಪಾದಯಾತ್ರಿಕರೊಬ್ಬರು ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ ಎನ್ನಲಾಗಿದೆ. ಆದರೆ, ವಿಡಿಯೋ ಅಸಲಿಯತ್ತೇ ಬೇರೆ ಇದೆ ಎಂಬುದು ತಡವಾಗಿ ತಿಳಿದುಬಂದಿದೆ.

ಒಂಬತ್ತು ಸೆಕೆಂಡುಗಳ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಬರೋಬ್ಬರಿ 17 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ವಿಡಿಯೋದಲ್ಲಿ ದಟ್ಟವಾದ ಕಾಡಿನಲ್ಲಿ ದೈತ್ಯಾಕಾರದ ಕೋತಿಯಂತಹ ಆಕೃತಿಯು ಚಲಿಸುತ್ತಿರುವುದನ್ನು ಕಾಣಬಹುದು. ಕಿತ್ತಳೆ ಬಣ್ಣದ ರೋಮದಿಂದ ಕೂಡಿದ ಜೀವಿಯು ಮರದ ಮೇಲೆ ಒರಗಿಕೊಂಡಿರುತ್ತದೆ. ತಕ್ಷಣ ವಿಡಿಯೋಗ್ರಾಫರ್ ಅನ್ನು ವೀಕ್ಷಿಸುತ್ತದೆ. ಅಲ್ಲಿಗೆ ವಿಡಿಯೋ ಕೊನೆಗೊಳ್ಳುತ್ತದೆ.

ವಿಡಿಯೋ ನೋಡಿದ ಅನೇಕರು ಹುಬ್ಬೇರಿಸಿದ್ದಾರೆ. ಆದರೆ, ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋವನ್ನು ನಕಲಿ ಎಂದು ವಾದಿಸಿದ್ದಾರೆ. ಕೆಲವರು ಬಿಗ್‌ಫೂಟ್‌ನಂತಹ ವೇಷಭೂಷಣವನ್ನು ಯಾರೋ ಧರಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ದೃಶ್ಯಾವಳಿ ಜಾಹೀರಾತಿನದ್ದು ಎಂದಿದ್ದಾರೆ. ಬಿಗ್‌ಫೂಟ್ ಹೆಸರಿನಲ್ಲಿ ಹಲವು ವಿಡಿಯೋಗಳು ಬಿಡುಗಡೆಯಾಗಿದ್ದು, ಅದ್ಯಾವುದನ್ನೂ ಪ್ರಮಾಣೀಕರಿಸಲಾಗಿಲ್ಲ.

12 ರಿಂದ 20 ಇಂಚು ಅಳತೆಯ ದೈತ್ಯ ಹೆಜ್ಜೆಗುರುತುಗಳು ಈ ಹಿಂದೆ ಅಲಾಸ್ಕನ್ ಕಾಡುಗಳಲ್ಲಿ ಕಂಡುಬಂದಿದ್ದವು. ಇದು ಬಿಗ್‌ಫೂಟ್ ಆಗಿರಬಹುದು ಎಂದು ಕೆಲವರು ವಾದಿಸಿದ್ದಾರೆ. ಹಿಮಾಲಯನ್ ಯೇತಿಯಂತೆ, ಬಿಗ್‌ಫೂಟ್ ಅಮೆರಿಕದಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಲಾದ ಕಾಲ್ಪನಿಕ ಜೀವಿ. ಬಿಗ್‌ಫೂಟ್ ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ. ಕೇವಲ ಪುರಾಣದಲ್ಲಿ ಮಾತ್ರ ಇದರ ಉಲ್ಲೇಖವಿದೆ. ಸುಮಾರು ಏಳು ಅಡಿ ಉದ್ದವಿರುವ ಬಿಗ್​ಪೂಟ್​, ಅರ್ಧ ಮನುಷ್ಯ ಹಾಗೂ ಅರ್ಧ ಕೋತಿಯ ಆಕೃತಿಯನ್ನು ಹೋಲುತ್ತದೆ. ಇಡೀ ದೇಹದ ತುಂಬಾ ಕೂದಲಿರುತ್ತದೆ.

ಉತ್ತರ ಕೆರೊಲಿನಾ, ಜಾರ್ಜಿಯಾ ಮತ್ತು ವಾಷಿಂಗ್ಟನ್‌ನ ಕಾಡುಗಳಲ್ಲಿ ಬಿಗ್‌ಫೂಟ್ ಇರುವಿಕೆಯನ್ನು ಹೇಳಿಕೊಂಡು ಅನೇಕ ಜನರು ಮುಂದೆ ಬಂದಿದ್ದಾರೆ. ಆದರೆ, ಯಾವುದಕ್ಕೂ ವೈಜ್ಞಾನಿಕ ಪುರಾವೆಗಳಿಲ್ಲ. ಬ್ರಿಡ್ಜ್‌ವಾಟರ್ ಟ್ರಯಾಂಗಲ್ ಎಂದು ಕರೆಯಲ್ಪಡುವ ಮ್ಯಾಸಚೂಸೆಟ್ಸ್‌ನ 200 ಚದರ ಮೈಲಿ ಪ್ರದೇಶದ ಜೌಗು ಪ್ರದೇಶದಲ್ಲಿ ಬಿಗ್‌ಫೂಟ್ ದೃಶ್ಯಗಳನ್ನು ನೋಡಿರುವುದಾಗಿ ಹಲವರು ಪ್ರತಿಪಾದಿಸಿದ್ದಾರೆ. ಸದ್ಯ ಈ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)