14 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತ್ರಿಪುರಾ ಶಿಕ್ಷಕನ ಕೊಲೆ ಪ್ರಕರಣದ ಆರೋಪಿ ಬಂಧನ  
ನ್ಯೂಸ್

14 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕನ ಕೇಸ್‌ಗೆ ಬಿಗ್ ಟ್ವಿಸ್ಟ್: ಅಸ್ಸಾಂನಲ್ಲಿ ಕೊಲೆ ಆರೋಪಿ ಅರೆಸ್ಟ್! | Teacher Missing Case

Teacher Missing Case: 14 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕರೊಬ್ಬರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರಾ ಪೊಲೀಸರ ಅಪರಾಧ ತನಿಖಾ ವಿಭಾಗ (CID) ಮಹತ್ವದ ಭೇದನೆ ಮಾಡಿದೆ. ಪ್ರಕರಣದ ಪ್ರಮುಖ ಶಂಕಿತ ಆರೋಪಿಯನ್ನು ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಬಾಜು ಎಂದು ಗುರುತಿಸಲಾಗಿದೆ. ಗುರುವಾರ ಈತನನ್ನು ಬಂಧಿಸಿ ಅಗರ್ತಲಾಗೆ ಕರೆತರಲಾಗಿದ್ದು, ಪಶ್ಚಿಮ ತ್ರಿಪುರಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಆರೋಪಿಯನ್ನು ನಾಲ್ಕು ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಏನಿದು 14 ವರ್ಷಗಳ ಹಳೆಯ ಪ್ರಕರಣ?

ಅಗರ್ತಲಾದ ಭಾಟಿ ಅಭಯನಗರದ ನಿವಾಸಿಯಾಗಿದ್ದ ಶಾಲಾ ಶಿಕ್ಷಕ ಆಶಿಶ್ ಸೋಮ್ (ಆಗ ಅವರಿಗೆ ಸುಮಾರು 40 ವರ್ಷ ವಯಸ್ಸಾಗಿತ್ತು) 2011ರ ಮೇ 28 ರಂದು ನಾಪತ್ತೆಯಾಗಿದ್ದರು. ಶಿಕ್ಷಕ ವೃತ್ತಿಯ ಜೊತೆಗೆ ಮರದ ವ್ಯಾಪಾರವನ್ನೂ (Timber business) ಮಾಡುತ್ತಿದ್ದ ಸೋಮ್, ವ್ಯಾಪಾರದ ಕೆಲಸದ ನಿಮಿತ್ತ ಕಾಂಚನಪುರಕ್ಕೆ ತೆರಳಿದ್ದರು. ಆದರೆ, ಆ ಬಳಿಕ ಅವರು ಮನೆಗೆ ವಾಪಸ್ಸಾಗಿರಲಿಲ್ಲ.

25 ಲಕ್ಷ ರೂ. ಹಣ ಪಡೆದಿದ್ದ ಕಿಡ್ನ್ಯಾಪರ್‌ಗಳು

ಪೊಲೀಸ್ ಮೂಲಗಳ ಪ್ರಕಾರ, ಸೋಮ್ ನಾಪತ್ತೆಯಾದ ಕೆಲ ದಿನಗಳ ಬಳಿಕ ಅವರ ಕುಟುಂಬಸ್ಥರಿಗೆ ಅಪರಿಚಿತರಿಂದ ಫೋನ್ ಕರೆಗಳು ಬಂದಿದ್ದವು. ಆಶಿಶ್ ಸೋಮ್ ಅವರನ್ನು ಅಪಹರಿಸಿರುವುದಾಗಿ ಹೇಳಿಕೊಂಡಿದ್ದ ಕಿಡ್ನ್ಯಾಪರ್‌ಗಳು, ಅವರನ್ನು ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕುಟುಂಬಸ್ಥರು ಹಂತ ಹಂತವಾಗಿ ಸುಮಾರು 25 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ಇಷ್ಟೆಲ್ಲಾ ಹಣ ನೀಡಿದರೂ ಸೋಮ್ ವಾಪಸ್ ಬರಲಿಲ್ಲ, ವರ್ಷಗಳೇ ಕಳೆದರೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ನಂತರ ಕುಟುಂಬಸ್ಥರು ಪ್ರಕರಣದ ಆಳವಾದ ತನಿಖೆಗೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ತನಿಖೆಯ ವೇಳೆ ಸೋಮ್ ಅವರ ವ್ಯಾಪಾರದ ಪಾಲುದಾರನಾಗಿದ್ದ ಹೊಸೈನ್ ಅಹ್ಮದ್ ಎಂಬಾತನ ಮೇಲೂ ಅಪಹರಣದ ಶಂಕೆ ವ್ಯಕ್ತವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ನಾವು ಬಾಜುವನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತ ಹಲವು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮದುವೆಯಾಗಿ, ಮಕ್ಕಳನ್ನು ಹುಟ್ಟಿಸಿ, ಚರ್ಚ್‌ಗೆ ಕಳುಹಿಸಿ: 2035 ರ ಜನಸಂಖ್ಯೆ ವರದಿ ಬೆನ್ನಲ್ಲೇ 'ಕ್ಯಾರೋಲಿನ್ ಲೆವಿಟ್' ಟ್ವೀಟ್ ವೈರಲ್! Karoline Leavitt

ಡಿಎನ್‌ಎ ವರದಿಗಾಗಿ ಕಾಯುತ್ತಿರುವ ಪೊಲೀಸರು

ಈ ವರ್ಷದ ಸೆಪ್ಟೆಂಬರ್ 16 ರಂದು ಕರೀಂಗಂಜ್ ಜಿಲ್ಲೆಯ ಸೋನ್‌ಬಿಲ್ ಪ್ರದೇಶದ ಸ್ಮಶಾನವೊಂದರ ಮೂರು ಅಪರಿಚಿತ ಸಮಾಧಿಗಳಿಂದ ಅಸ್ಥಿಪಂಜರದ ಅವಶೇಷಗಳು ಪತ್ತೆಯಾದ ಬಳಿಕ ಈ ತನಿಖೆಗೆ ಹೊಸ ತಿರುವು ಸಿಕ್ಕಿತ್ತು. ಪತ್ತೆಯಾದ ಅವಶೇಷಗಳೊಂದಿಗೆ ಹೋಲಿಕೆ ಮಾಡಿ ನೋಡಲು ಪೊಲೀಸರು ಈಗಾಗಲೇ ಸೋಮ್ ಅವರ ಕುಟುಂಬ ಸದಸ್ಯರ ಡಿಎನ್‌ಎ (DNA) ಮಾದರಿಗಳನ್ನು ಸಂಗ್ರಹಿಸಿದ್ದು, ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. (ಏಜೆನ್ಸೀಸ್​)