ನ್ಯೂಸ್

ಹೌದು ನಾನು ಮಾಡ್ತೀನಿ… ಬಡವರಿಗೆ ಹಣ ಹಂಚುವುದರ ಹಿಂದಿದೆ ಕಹಿ ಸತ್ಯ! ತಪ್ಪೊಪ್ಪಿಕೊಂಡ ಹರ್ಷ ಸಾಯಿ

ವಿಜಯವಾಡ: ತೆಲುಗು ರಾಜ್ಯಗಳಲ್ಲಿ ಹರ್ಷ ಸಾಯಿ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಬಡವರಿಗೆ ಸಹಾಯ ಮಾಡುವ ಮೂಲಕ ಉತ್ತಮ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಬಡವರಿಗೆ ಟಿವಿ, ಫ್ರಿಡ್ಜ್ ಕೊಡುವುದು ಮತ್ತು ಹಣದ ಅವಶ್ಯಕತೆ ಇರುವವರಿಗೆ ಆರ್ಥಿಕ ನೆರವನ್ನು ಒದಗಿಸುವುದು ಸೇರಿದಂತೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಈ ಕಾರಣದಿಂದ ಹರ್ಷ ಸಾಯಿ ಫಾಲೋವರ್ಸ್ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಇದೇ ಕ್ರೇಜ್‌ನೊಂದಿಗೆ ಸಿನಿಮಾವನ್ನು ಕೂಡ ಆರಂಭಿಸಿದ್ದಾರೆ. ಆದರೆ, ಹರ್ಷ ಸಾಯಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಯು ಹಲವು ದಿನಗಳಿಂದ ಕೇಳಿಬರುತ್ತಿದೆ. ಬಡವರಿಗೆ ಲಕ್ಷಾಂತರ ರೂಪಾಯಿ ಹಂಚಲು ಆದಾಯದ ಮೂಲ ಯಾವುದು? ಸೋಶಿಯಲ್​ ಮೀಡಿಯಾದಿಂದ ಅಷ್ಟೊಂದು ಹಣ ಬರುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ಜನ ಸಾಮಾನ್ಯರಲ್ಲಿ ಇದೆ.

ಈ ಪ್ರಶ್ನೆಗಳ ನಡುವೆಯೇ ಒಂದಿಷ್ಟು ಆರೋಪಗಳು ಕೂಡ ಹರ್ಷ ಸಾಯಿ ವಿರುದ್ಧ ಕೇಳಿಬಂದಿದೆ. ಈ ಹರ್ಷ ಸಾಯಿ ಜನರು ಅಂದುಕೊಂಡಷ್ಟು ಒಳ್ಳೆಯವರಲ್ಲ, ಆತ ಮೊಸಗಾರ ಎಂದು ರವಿ ಮಾರ್ಕ್​ ಅಲಿಯಾಸ್ ಯುವಸಾಮ್ರಾಟ್ ರವಿ ಎಂಬುವರು ಕಳೆದ ಮೂರು ವರ್ಷಗಳಿಂದ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಅನೇಕ ಸಂದರ್ಶನಗಳಲ್ಲಿಯೂ ಹರ್ಷ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದರು.

ಆರೋಪ ಏನು?

ಇತ್ತೀಚೆಗೆ ಪ್ರಮುಖ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರವಿ ಮಾರ್ಕ್​ ಅವರು ಸೆನ್ಸೇಷನಲ್ ಕಾಮೆಂಟ್ ಮಾಡಿದರು. ಹರ್ಷ ಸಾಯಿ ತನ್ನ ಹಿಂದೆ ಒಂದು ದೊಡ್ಡ ಮಾಫಿಯಾವನ್ನೇ ನಡೆಸುತ್ತಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಈತನ ಹಿಂದೆ ನೋಯ್ಡಾದ ದೊಡ್ಡ ಗ್ಯಾಂಗ್ ಇದೆ. ಸಾಫ್ಟ್​ವೇರ್ ಕಂಪನಿಯಲ್ಲಿದ್ದುಕೊಂಡು ಅಕ್ರಮ ಬೆಟ್ಟಿಂಗ್​ಗೆ ಉತ್ತೇಜನ ನೀಡುತ್ತಿದ್ದಾರೆ. 10,000 ಅಥವಾ 20,000 ಫಾಲೋವರ್ಸ್​ಗಳನ್ನು ಹೊಂದಿದ್ದರೆ ಬೆಟ್ಟಿಂಗ್​ ಕಂಪನಿಯು ಅವರನ್ನು ಸಂಪರ್ಕಿಸಿ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಲು ಉತ್ತೇಜಿಸುತ್ತದೆ. ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಹರ್ಷ ಸಾಯಿ ಕನಿಷ್ಠ 90 ಲಕ್ಷ ತೆಗೆದುಕೊಳ್ಳುತ್ತಾರೆ. ಈ ಹಣದಲ್ಲಿ 60 ಲಕ್ಷ ಜಿಎಸ್‌ಟಿ ಮತ್ತು ಉಳಿದ 40 ಲಕ್ಷ ಅವರ ಖಾತೆಗೆ ಹೋಗುತ್ತದೆ. ಬೆಟ್ಟಿಂಗ್ ಆ್ಯಪ್​ಗಳನ್ನು ಪ್ರಚಾರ ಮಾಡಲು ಹರ್ಷ ಸಾಯಿ ಬಡ ಜನರನ್ನು ಬಳಸಿಕೊಳ್ಳುತ್ತಿದ್ದಾರೆ. ಒಳ್ಳೆಯವನೆನಿಸಿದರೆ ಮಾತ್ರ ಜನ ನಂಬುತ್ತಾರೆ. ಜನ ನಂಬಿದಾಗ ಬೆಟ್ಟಿಂಗ್ ಆ್ಯಪ್​ಗಳಲ್ಲಿ ಹಣ ಹೂಡುತ್ತಾರೆ. ಒಂದು ವಿಡಿಯೋದಲ್ಲಿ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದರೆ 40 ಲಕ್ಷ ರೂಪಾಯಿ ಸಿಗುತ್ತದೆ. ಇನ್ನೂ ಅಂತಹ ವಿಡಿಯೋಗಳಲ್ಲಿ ಎಷ್ಟು ಆ್ಯಪ್, ಎಷ್ಟು ಬಾರಿ ಪ್ರಚಾರ ಮಾಡಿದರೆ ಎಷ್ಟು ಹಣ ಸಿಗುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ ಎಂದು ರವಿ ಹೇಳಿದ್ದಾರೆ.

ಹರ್ಷ ಸಾಯಿ ಪ್ರತಿಕ್ರಿಯೆ ಏನು?

ತನ್ನ ವಿರುದ್ಧದ ಗಂಭೀರ ಆರೋಪಗಳಿಗೆ ಸಂದರ್ಶನವೊಂದರಲ್ಲಿ ಹರ್ಷ ಸಾಯಿ ಖಡಕ್​ ಉತ್ತರವನ್ನು ನೀಡಿದ್ದಾರೆ. ನಾನು ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿಲ್ಲ. ಬದಲಾಗಿ ಅಕ್ರಮವಲ್ಲದ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದೇನೆ ಎಂದು ಹರ್ಷ ಸಾಯಿ ಸಮರ್ಥಿಸಿಕೊಂಡಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುವುದು ತಪ್ಪಾಗಿದ್ದರೆ, ಅದನ್ನು ಏಕೆ ನಿಷೇಧಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಟಿಕ್ ಟಾಕ್ ಆ್ಯಪ್ ಅನ್ನು ಬ್ಯಾನ್ ಮಾಡಲಾಗಿದೆ. ಯಾರಾದರೂ ಅದನ್ನು ಬಳಸಬಹುದೇ? ಬೆಟ್ಟಿಂಗ್ ಆ್ಯಪ್​ಗಳನ್ನೂ ನಿಷೇಧಿಸಿದರೆ ಯಾವುದೇ ತೊಂದರೆಯಾಗದು ಎಂದರು. ಆದರೆ, ದೊಡ್ಡ ಸೆಲೆಬ್ರಿಟಿಗಳು ಮಾಡುವ ಕೆಲಸಗಳಿಗೆ ಹೋಲಿಸಿದರೆ ನಾವು ಮಾಡುವುದು ತುಂಬಾ ಚಿಕ್ಕದು. ಬೆಟ್ಟಿಂಗ್ ಆ್ಯಪ್​​ಗಳನ್ನು ಪ್ರಚಾರ ಮಾಡದಿದ್ದರೆ ನಮಗೆ ಬರುವ ಹಣ ಸಣ್ಣಪುಟ್ಟ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳ ಪಾಲಾಗುತ್ತದೆ. ಅರಿವಿಲ್ಲದೆ, ಹಕ್ಕುಚ್ಯುತಿ ಇಲ್ಲದೆ ಪ್ರಚಾರ ಮಾಡುತ್ತಾರೆ. ಅದರೆ, ನಾವು ತುಂಬಾ ಎಚ್ಚರಿಕೆ ವಹಿಸಿ ಜನರಿಗೆ ಎಚ್ಚರಿಕೆ ಸಂದೇಶ ನೀಡುತ್ತೇವೆ ಎಂದು ಹರ್ಷ ಸಾಯಿ ಹೇಳಿದರು.

ಕೆಲವರು ಟೆಲಿಗ್ರಾಮ್​ ಗ್ರೂಪ್‌ಗಳಲ್ಲಿ ಜನರನ್ನು ಆಹ್ವಾನಿಸಿ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಹಣ ಹಾಕಿ ಹಣ ಕಳೆದುಕೊಳ್ಳುವಂತೆ ಮಾಡುತ್ತಾರೆ. ಆದರೆ, ನಾವು ಆ ರೀತಿ ಮಾಡುತ್ತಿಲ್ಲ. ಬೆಟ್ಟಿಂಗ್ ಆ್ಯಪ್​ಗಳನ್ನು ಪ್ರಚಾರ ಮಾಡದಿದ್ದರೆ ನಷ್ಟವಾಗುತ್ತದೆ. ಹಾಗಾಗಿಯೇ ನಾವು ಬೆಟ್ಟಿಂಗ್ ಆ್ಯಪ್​ಗಳನ್ನು ಜವಾಬ್ದಾರಿಯುತವಾಗಿ ಪ್ರಚಾರ ಮಾಡುತ್ತಿದ್ದೇವೆ ಎಂದು ಹರ್ಷ ಸಾಯಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)