ಮುಂಬೈ: ಭಾರತದ ಷೇರುಪೇಟೆಯ ಸೂಚ್ಯಂಕ ಬಿಎಸ್ಇ ಸೆನ್ಸೆಕ್ಸ್, ಕಳೆದ ಏಳು ತಿಂಗಳ (ಏಪ್ರಿಲ್ 12) ಅವಧಿಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 1,170 ಅಂಶಗಳಷ್ಟು ದೊಡ್ಡ ಕುಸಿತ ಕಂಡಿದೆ. ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂಪಡೆತ, ದೇಶದ ಅತಿದೊಡ್ಡ ಫಿನ್ಟೆಕ್ ಕಂಪನಿ ಪೇಟಿಎಂನ ದುರ್ಬಲ ಲಿಸ್ಟಿಂಗ್ ಮುಂತಾದವು ಹೂಡಿಕೆದಾರರ ಮೇಲೆ ಪರಿಣಾಮ ಬೀರಿವೆ.
ಸತತ ನಾಲ್ಕನೇ ಅವಧಿಗೆ ಸೆನ್ಸೆಕ್ಸ್ ಕುಸಿತ ಕಂಡಿದೆ. ಸೋಮವಾರದ ವಹಿವಾಟಿನಲ್ಲಿ 1,170.12 ಅಂಶ (1.96%) ಕುಸಿತ ಕಂಡು 58,465.89 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಇದು ಎರಡು ತಿಂಗಳ ಅವಧಿಯ ಕನಿಷ್ಠಮಟ್ಟವಾಗಿದೆ. ಎನ್ಎಸ್ಇ ನಿಫ್ಟಿ 348.25 ಅಂಶ (1.96%) ಕುಸಿದು 17,416.55 ಅಂಶದಲ್ಲಿ ವಹಿವಾಟು ಮುಗಿಸಿದೆ. ಇದು ಸೆಪ್ಟೆಂಬರ್ 20ರ ನಂತರದ ಕನಿಷ್ಠ ಮಟ್ಟವಾಗಿದೆ. ಬಜಾಜ್ ಫೈನಾನ್ಸ್, ಬಜಾಜ್ ಫಿನ್ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಎನ್ಟಿಪಿಸಿ, ಟೈಟಾನ್, ಎಸ್ಬಿಐ ಷೇರುಗಳ ಮೌಲ್ಯ ಶೇಕಡ 5.74ರಷ್ಟು ಕುಸಿತ ಕಂಡಿವೆ. ಭಾರ್ತಿ ಏರ್ಟೆಲ್, ಏಷ್ಯನ್ ಪೇಂಟ್ಸ್ ಮತ್ತು ಪವರ್ಗ್ರಿಡ್ ಷೇರು ಮೌಲ್ಯ ಏರಿಕೆಯಾಗಿದೆ.
ಕುಸಿತಕ್ಕೆ ಐದು ಕಾರಣ
- ವಾಣಿಜ್ಯ ಕಾರಣ: ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಶೇಕಡ 4ಕ್ಕೂ ಹೆಚ್ಚು ಕುಸಿತ ಕಂಡಿದೆ. 15 ಶತಕೋಟಿ ಡಾಲರ್ಗೆ ಸೌದಿ ಅರಮ್ಕೊಗೆ ತನ್ನ ತೈಲ ಸಂಸ್ಕರಣಾ ಘಟಕ ಮತ್ತು ಪೆಟ್ರೋಕೆಮಿಕಲ್ ವ್ಯವಹಾರದ ಶೇಕಡ 20 ಪಾಲನ್ನು ಮಾರಾಟ ಮಾಡುವ ಪ್ರಸ್ತಾವನೆ ಮುಂದಿಟ್ಟ ಬೆನ್ನಿಗೆ ಈ ಕುಸಿತ ಸಂಭವಿಸಿದೆ. ಸೆನ್ಸೆಕ್ಸ್ನಲ್ಲಿ ಪೇಟಿಎಂ ಷೇರುಮೌಲ್ಯ ಶೇಕಡ 13 ಕುಸಿತ ಕಂಡು 1,360.30 ರೂಪಾಯಿಯಲ್ಲಿ ದಿನದ ವಹಿವಾಟು ನಿಲ್ಲಿಸಿದೆ.
- ಜಾಗತಿಕ ವಹಿವಾಟು ದುರ್ಬಲ: ಚೀನಾದ ರಿಟೇಲ್ ಸೇಲ್ಸ್ ಕಳೆದ ವರ್ಷ ಏಪ್ರಿಲ್ಗೆ ಹೋಲಿಸಿದರೆ ಶೇಕಡ 17.7 ಏರಿಕೆಯಾಗಿದೆ. ಮುನ್ನೋಟ ಪ್ರಕಾರ ಶೇಕಡ 24.8 ಸಾಧನೆಯಾಗಬೇಕಾಗಿತ್ತು. ಕೈಗಾರಿಕಾ ಔಟ್ಪುಟ್ ಶೇಕಡ 9.8 ಏರಿಕೆಯಾಗಿದ್ದು, ನಿರೀಕ್ಷೆಯ ಗುರಿ ತಲುಪಿದೆ. ಆದಾಗ್ಯೂ, ಜಾಗತಿಕ ಹಣದುಬ್ಬರ ಪ್ರಮಾಣ ಹೆಚ್ಚಾಗಿರುವ ಕಾರಣ ಚಿನ್ನ ಮೂರು ತಿಂಗಳ ಗರಿಷ್ಠಕ್ಕೆ ಏರಿಕೆಯಾಗಿದೆ. ಅಮೆರಿಕದ ಎಸ್ಆಂಡ್ಪಿ 500 ಫ್ಯೂಚರ್ಸ್, ನಾಸ್ಡಾಕ್ ಎರಡೂ ನ.19ರ ರ್ಯಾಲಿಯ ಬಳಿಕ ಶೇಕಡ 0.1ರಷ್ಟು ಇಳಿಮುಖವಾಗಿವೆ.
- ಫಾರೆಕ್ಸ್ ಮೀಸಲು ಇಳಿಕೆ: ದೇಶದ ವಿದೇಶ ವಿನಿಮಯ ಮೀಸಲು ನ.12ರಂದು ಕೊನೆಗೊಂಡ ವಾರದ ಪ್ರಕಾರ 763 ದಶಲಕ್ಷ ಡಾಲರ್ಗಳಿಂದ 640 ಶತಕೋಟಿ ಡಾಲರ್ಗೆ ಇಳಿಕೆಯಾಗಿದೆ. ಸೆಪ್ಟೆಂಬರ್ 3ಕ್ಕೆ ಕೊನೆಯಾದ ವಾರದಲ್ಲಿ 642.45 ಶತಕೋಟಿ ಡಾಲರ್ನ ಸಾರ್ವಕಾಲಿಕ ಎತ್ತರಕ್ಕೆ ಏರಿತ್ತು.
- ಪಿಎಸ್ಯುು ಬ್ಯಾಂಕ್ಗಳ ವಹಿವಾಟು: ಪಿಎಸ್ಯುು ಬ್ಯಾಂಕ್ ಇಂಡೆಕ್ಸ್ ರಿಯಾಲ್ಟಿ ಸೆಕ್ಟರ್ ಜತೆಗೆ ಶೇಕಡ 3-4 ಕುಸಿತ ಕಂಡಿದೆ. ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಪಿಎನ್ಬಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳ ಮೌಲ್ಯ ಶೇಕಡ 4 ಇಳಿಕೆಯಾಗಿವೆ. ಶೋಭಾ, ಒಬೆರಾಯ್ ರಿಯಾಲ್ಟಿ, ಪ್ರೆಸ್ಟೀಜ್ ಎಸ್ಟೇಟ್ಸ್, ಬ್ರಿಗೇಡ್ ಎಂಟರ್ಪ್ರೖೆಸಸ್, ಗೋದ್ರೆಜ್ ಷೇರುಗಳು ಕೂಡ ಕುಸಿದಿವೆ.
- ಆಡಳಿತ ಮತ್ತು ತಾಂತ್ರಿಕ : ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಕ್ರಮ ಹೂಡಿಕೆದಾರರ ಸೆಂಟಿಮೆಂಟ್ ಮೇಲೆ ಪರಿಣಾಮ ಬೀರಿದೆ. ಜಿಡಿಪಿ ಬೆಳವಣಿಗೆ ಕುರಿತ ಡೇಟಾ, ಆರ್ಬಿಐನ ಇತ್ತೀಚಿನ ಟಿಪ್ಪಣಿಗಳು ಮುಂತಾದ ತಾಂತ್ರಿಕ ಕಾರಣಗಳು ಕೂಡ ಇವೆ.