ನ್ಯೂಸ್

ಗಣಿನಾಡು ಬಳ್ಳಾರಿಯತ್ತ ಭಾರತ್ ಜೋಡೋ; ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ರಾಹುಲ್ ಗಾಂಧಿ ಕಿಡಿ

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸಂಚರಿಸುತ್ತಿದ್ದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೋ ಯಾತ್ರೆ ಶುಕ್ರವಾರ ಗಣಿ ನಾಡು ಬಳ್ಳಾರಿ ಪ್ರವೇಶಿಸಲಿದೆ. ನಾಲ್ಕು ದಿನಗಳ ಅವಧಿಯಲ್ಲಿ ರಾಹುಲ್ ಚಿತ್ರದುರ್ಗದ ಸಹಸ್ರಾರು ಕಾರ್ಯಕರ್ತರ ಜತೆ ಅಂದಾಜು 120 ಕಿ. ಮೀ. ಹೆಜ್ಜೆ ಹಾಕಿ ಏಕತೆ ಸಾರುವ ಮೂಲಕ ಕಾಂಗ್ರೆಸ್ ಬಲಪಡಿಸವ ಕಾರ್ಯ ಮಾಡಿದ್ದಾರೆ.

ಲಂಬಾಣಿ ಸಮುದಾಯ, ರೈತರು, ರೇಷ್ಮೆ ಬೆಳೆಗಾರರು, ಕೂಲಿ ಕಾರ್ವಿುಕರು, ಶಾಲಾ ಮಕ್ಕಳು, ನಿರುದ್ಯೋಗಿ ಯುವಕ -ಯುವತಿಯರು ಹೀಗೆ ಸಮಾಜದ ನಾನಾ ಸ್ತರಗಳ ಜತೆ ಮುಖಾಮುಖಿ ರ್ಚಚಿಸಿದ್ದಾರೆ. ವಿದ್ಯಾರ್ಥಿಯ ಸವಾಲು ಸ್ವೀಕರಿಸಿ ರಸ್ತೆಯಲ್ಲಿಯೇ ಡಿಪ್ಸ್ ಹೊಡೆದು ಸೈ ಎನಿಸಿ ಕೊಂಡಿದ್ದು ವಿಶೇಷ. ಯಾತ್ರೆ ಉದ್ದಕ್ಕೂ ಕೇಂದ್ರ ಸರ್ಕಾರ, ಆರ್​ಎಸ್​ಎಸ್, ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ.

ರೇಷ್ಮೆ ಬೆಳೆಗಾರರ ಜತೆ ಸಂವಾದ: ಕೊಂಡ್ಲಹಳ್ಳಿ ಮನೆಯೊಂದರಲ್ಲಿ ಗುರುವಾರ ಚಹಾ, ಉಪಾಹಾರ ಸೇವಿಸಿದ ರಾಹುಲ್, ರೇಷ್ಮೆ ಬೆಳೆಗಾರರ ಜತೆ ಸಂವಾದ ನಡೆಸಿ ಮಲಬಾರ್ ತಳಿ ಕುರಿತು ಮಾಹಿತಿ ಪಡೆದರು. ಅಲ್ಲಿ ಅಭಿಮಾನಿಗಳು ಸಂಗೊಳ್ಳಿ ರಾಯಣ್ಣ ವಿಗ್ರಹ ನೀಡಿದರು. ಕುಮಾರ ಸಮತಳ ನೇತೃತ್ವದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿ ಸದಸ್ಯರು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ, ಯು.ಟಿ.ಖಾದರ್, ದಿನೇಶ್ ಗುಂಡೂರಾವ್, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್, ತಿಪ್ಪೇಸ್ವಾಮಿ, ಸಂತೋಷ್ ಲಾಡ್, ಲಕ್ಷಿ್ಮೕ ಹೆಬ್ಬಾಳ್ಕ ರ್, ಬಿ.ಎನ್.ಚಂದ್ರಪ್ಪ ಇತರರಿದ್ದರು.

ರಾಜ್ಯದ ಯುವಕರು ಉದ್ಯೋಗ ವಂಚಿತರಾಗಲು ಬಿಜೆಪಿ, ಆರ್​ಎಸ್​ಎಸ್​ನ ಕನ್ನಡ ವಿರೋಧಿ ಧೋರಣೆಯೇ ಕಾರಣವಾಗಿದೆ. ಕನ್ನಡದ ಇತಿಹಾಸ, ಸಂಸ್ಕೃತಿ ಹಾಗೂ ಜನರ ಮೇಲೆ ದಾಳಿ ನಡೆಸಲು ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ. ಕನ್ನಡಿಗರು ಹೀಗೆ ಜೀವನ ನಡೆಸ ಬೇಕೆಂದು ಯಾರೂ ನಿರ್ದೇಶಿಸಲೂ ಸಾಧ್ಯವಿಲ್ಲ. ಹಾಗೇನದರೂ ಮಾಡಿದರೆ ರಾಜ್ಯದ ಜನರ ಆಕ್ರೋಶ ಎದುರಿಸಬೇಕಾಗುತ್ತದೆ. ಇಂಥದ್ದೇ ಭಾಷೆಯಲ್ಲೇ ಪರೀಕ್ಷೆಗಳನ್ನು ಬರೆಯಬೇಕೆಂದು ಹೇಳಲಾಗದು.

| ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಯಡಿಯೂರಪ್ಪ ಅವರಿಲ್ಲದೆ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ವರ್ಕೌಟ್ ಆಗದು. ಬಿಎಸ್​ವೈ ಬಿಟ್ಟರೆ ಅವರಂತ ಮತ್ತೊಬ್ಬ ಲೀಡರ್ ಆ ಪಕ್ಷದಲ್ಲಿ ಯಾರಿದ್ದಾರೆ? ಬಸವರಾಜ ಬೊಮ್ಮಾಯಿ ಒಬ್ಬರೇ ಪ್ರವಾಸ ನಡೆಸಿದರೆ ಯಾವುದೇ ಲಾಭ ಇಲ್ಲ.

| ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ನಾವ್ಯಾರೂ ಸನ್ಯಾಸಿಗಳಲ್ಲ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ರಾಜಕೀಯ ಲಾಭವನ್ನೂ ನಿರೀಕ್ಷಿಸುತ್ತಿದೆ. ಯಾತ್ರೆಯಿಂದ ದೇಶಕ್ಕೆ ಒಳ್ಳೆಯದಾಗುವ ಜತೆಗೆ ನಮ್ಮ ಪಾರ್ಟಿಗೂ ಅದರ ಲಾಭ ದೊರೆಯುತ್ತದೆ.

| ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ