ಅಸ್ಸಾಂ: ಭಾರತೀಯ ಯುವ ಕಾಂಗ್ರೆಸ್ನ ಹಲವು ವಾಹನಗಳ ಮೇಲೆ ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ (BJYM) ಕಾರ್ಯಕರ್ತರು ಉದ್ದೇಶಿತ ದಾಳಿ ನಡೆಸಿದೆ ಎಂದು ಆರೋಪಿಸಿದ ಕಾಂಗ್ರೆಸ್ ಇದೀಗ ದೂರು ದಾಖಲಿಸಲು ಮುಂದಾಗಿದೆ ಎಂದು ವರದಿ ತಿಳಿಸಿದೆ. ಘಟನೆ ಅಸ್ಸಾಂನ ಲಖಿಂಪುರ ಜಿಲ್ಲೆಯಲ್ಲಿ ವರದಿಯಾಗಿದೆ.
ಕಾಂಗ್ರೆಸ್ ನಾಯಕರ ಪ್ರಕಾರ, ಲಖಿಂಪುರ ಜಿಲ್ಲೆಗೆ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಪ್ರವೇಶಕ್ಕೂ ಮುನ್ನ ಶುಕ್ರವಾರ ರಾತ್ರಿ ಬಿವೈಜಿಎಂ (BJYM) ಕಾರ್ಯಕರ್ತರು ಕಾಂಗ್ರೆಸ್ನ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಬಿಜೆವೈಎಂ ಕಾರ್ಯಕರ್ತರು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಭಾವಚಿತ್ರವನ್ನು ವಿರೂಪಗೊಳಿಸಿದ್ದಾರೆ ಮತ್ತು ರಾಹುಲ್ ಗಾಂಧಿ ಫೋಟೋವಿರುವ ಬ್ಯಾನರ್ ಹಾಗೂ ಕಟೌಟ್‌ಗಳಿಗೆ ಹಾನಿ ಮಾಡಿದ್ದಾರೆ ಎಂದು ಪಕ್ಷವು ಆರೋಪಿಸಿದೆ.
ದಾಳಿಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸುವಂತೆಯೂ ಕಾಂಗ್ರೆಸ್ ಆಗ್ರಹಿಸಿದೆ. ಘಟನೆ ಬಗ್ಗೆ ಮಾತನಾಡಿದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ, "ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಕೆಲವರು ಶುಕ್ರವಾರ ಸಂಜೆ ಲಖಿಂಪುರದಲ್ಲಿದ್ದ ನಮ್ಮ ವಾಹನಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ ಎಂದು ಹೇಳಿದರು.
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸೂಚನೆಯ ಮೇರೆಗೆ ನಮ್ಮ ವಾಹನಗಳ ಮೇಲೆ ಈ ರೀತಿಯ ದಾಳಿ ನಡೆಸಲಾಗಿದೆ ಎಂದು ಬೋರಾ ಆರೋಪಿಸಿದ್ದಾರೆ,(ಏಜೆನ್ಸೀಸ್).