ಭಾರತೀಯ ಬಾಹ್ಯಾಕಾಶ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು, ಮುಂದುವರಿದ ರಾಷ್ಟ್ರಗಳ ಗುಂಪಿನಲ್ಲಿ ಗುರುತಿಸಿಕೊಳ್ಳುವಷ್ಟು ಎತ್ತರಕ್ಕೆ ಭಾರತದ ಸಾಧನೆ ಸದ್ದು ಮಾಡಿದೆ. ಮಂಗಳಯಾನದ ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2024ರಲ್ಲಿ ಹಲವು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿ ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ವೃದ್ಧಿಸಿಕೊಂಡಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಿರುವ ಪರಿಣಾಮ ಟೆಕ್ನಾಲಜಿ ಸಂಬಂಧಿತ ಸಂಶೋಧನಾ ಕಾರ್ಯಕ್ಕೆ ವೇಗ ದೊರೆತಿದೆ. ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರ ಹಾಗೂ ಸೌಲಭ್ಯಗಳ ಬಳಕೆಗೆ ವಿಜ್ಞಾನಿಗಳ ಬಳಗ ನೂತನ ತಂತ್ರಾಂಶ ಹಾಗೂ ಆಪ್ ಆಧಾರಿತ ಸೇವೆಗಳನ್ನು ಪರಿಚಯಿಸಿದೆ.
ಚಿತ್ರದುರ್ಗದ ಏರೋನಾಟಿಕಲ್ ಪರೀಕ್ಷಾ ಕೇಂದ್ರದಲ್ಲಿ ಮರುಬಳಸಬಹುದಾದ ಉಡಾವಣಾ ವಾಹಕ ‘ಪುಷ್ಪಕ್’ ಯಶಸ್ವಿಯಾಗಿ ರನ್ವೇಯಲ್ಲಿ ಇಳಿದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಇದರಿಂದ ಸೇನಾ ಚಟುವಟಿಕೆಗೆ ನೆರವಾಗಲು ಪುಷ್ಪಕ್ ಸಹಕಾರಿಯಾಗಿದ್ದು, ಸ್ವದೇಶಿ ತಂತ್ರಜ್ಞಾನ ಬತ್ತಳಿಕೆಗೆ ಹೊಸ ಸಾಧನೆ ಸೇರ್ಪಡೆಯಾದಂತಾಗಿದೆ. ಇದರ ಜತೆಗೆ ಸಣ್ಣ ಉಪಗ್ರಹ ಉಡಾವಣಾ ವಾಹಕ (ಎಸ್ಎಸ್ಎಲ್ವಿ-ಡಿ3) ಉಡಾವಣೆಯೂ ಯಶಸ್ವಿಯಾಯಿತು. ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಈ ವಾಹಕವು ದೀರ್ಘಕಾಲಿಕ ಬಾಳಿಕೆ ಬರುವಂತೆ ಸಿದ್ಧಪಡಿಸಿರುವುದು ಇಸ್ರೋದ ಸಾಧನೆ.
ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆ ‘ಗಗನ್ಯಾನ್’ಗೆ ನಾಲ್ವರು ಗಗನಯಾನಿಗಳ ಹೆಸರನ್ನು ಆಯ್ಕೆ ಮಾಡಲಾಗಿದೆ. ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣ ನಾಯಕ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಹಾಗೂ ವಿಂಗ್ ಕಮಾಂಡರ್ ಸುಭಾಂಶು ಶುಕ್ಲಾ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಫೆ. 27ರಂದು ಅಧಿಕೃತವಾಗಿ ಪ್ರಕಟಿಸಿದರು. ಈ ನಾಲ್ವರು ವಿವಿಧ ಹಂತಗಳಲ್ಲಿ ತರಬೇತಿ ಪಡೆಯಲು ಸಾಧ್ಯವಾಗಿದ್ದು, ಗಗನಯಾನಕ್ಕೆ ಬಿರುಸಿನ ಸಿದ್ಧತೆ ನಡೆಸಲಾಗಿದೆ.
ಇಸ್ರೋ ತನ್ನ ಮೊದಲ ಅನ್ಲಾಗ್ ಸ್ಪೇಸ್ ಮಿಷನ್ಗೆ ಕನ್ನಡ ರಾಜ್ಯೋತ್ಸವ ದಿನವಾದ ನ. 1ರಂದು ಚಾಲನೆ ನೀಡಿದೆ. ಭೂಮಿಯ ಮೇಲೆ ಬಾಹ್ಯಾಕಾಶದ ಮಾದರಿಯಲ್ಲಿರುವ ವಾತಾವರಣವನ್ನು ರೂಪಿಸಿ ಬೇರೆ ಬೇರೆ ಗ್ರಹಗಳ ಮೇಲ್ಮೈ ಹೋಲುವ ಕೃತಕ ಭೂಪ್ರದೇಶದ ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಕಳೆದ ಆಗಸ್ಟ್ ಅಂತ್ಯದಲ್ಲಿ ವಿಶಾಖಪಟ್ಟಣದ ನೌಕಾನೆಲೆಯಲ್ಲಿ ದೇಶದ ನಾಲ್ಕನೇ ಅಣು ಜಲಾಂತರ್ಗಾಮಿ ‘ಐಎನ್ಎಸ್ ಅರಿಘಾತ್’ ನೌಕಾಪಡೆಗೆ ಯಶಸ್ವಿಯಾಗಿ ಸೇರ್ಪಡೆಗೊಳಿಸಲಾಯಿತು. ಬಲಾಢ್ಯ ರಾಷ್ಟ್ರಗಳು ಹೊಂದಿರುವ ಇಂತಹ ಸಬ್ವೆುರಿನ್ಗಳನ್ನು ಭಾರತ ಹೊಂದುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಈವರೆಗೆ ಭಾರತ ಒಟ್ಟು 18 ಸಬ್ವೆುರಿನ್ಗಳನ್ನು ಹೊಂದಿದ್ದು, ವಿಶ್ವದಲ್ಲಿ 8ನೇ ಸ್ಥಾನದಲ್ಲಿದೆ.
ದೇಶದ 115 ವಿಶ್ವವಿದ್ಯಾಲಯಗಳು/ ಅಕಾಡೆಮಿಕ್ ಸಂಸ್ಥೆಗಳು ಮತ್ತು 22 ಪಿಜಿ ಕಾಲೇಜ್ಗಳಲ್ಲಿ ಸಂಶೋಧನಾ ಮೂಲಸೌಕರ್ಯ ಹೆಚ್ಚಳಕ್ಕಾಗಿ 273.89 ಕೋಟಿ ರೂ. ಅನುದಾನ ಒದಗಿಸಿ ಶಿಕ್ಷಣ ಕ್ಷೇತ್ರದಲ್ಲಿ ರಿಸರ್ಚ್ ಪ್ರಾಜೆಕ್ಟ್ ಗಳಿಗೆ ಉತ್ತೇಜನ ನೀಡಲಾಗಿದೆ. ಜತೆಗೆ 9 ವಿವಿಗಳಲ್ಲಿ ರಿಸರ್ಚ್ ಇಕೋ ಸಿಸ್ಟಂ ಮೇಲ್ದರ್ಜೆಗೇರಿಸುವ ಉಪಕ್ರಮ ಕೈಗೊಳ್ಳಲಾಗಿದೆ. ನವೋದ್ಯಮ ಹಾಗೂ ಆವಿಷ್ಕಾರ ಇಕೋ ಸಿಸ್ಟಂ ಕಲ್ಪಿಸಲು ‘ನಿಧಿ’ ಕಾರ್ಯಕ್ರಮದ ಮೂಲಕ 2 ಹಾಗೂ 3ನೇ ಹಂತದ ನಗರಗಳಲ್ಲಿ ಇನ್ಕ್ಯೂಬೇಟರ್ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ ಮಹಿಳಾ ನವೋದ್ಯಮಿಗಳಿಗಾಗಿಯೇ ಹೊಸ ಐದು ಇನ್ಕ್ಯೂಬೇಟರ್ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
2024ರ ಜನವರಿ 1ರಂದೇ ಎಕ್ಸ್ರೇ ಪೋಲಾರಿಮೀಟರ್ ಉಪಗ್ರಹವನ್ನು ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಹಾರಿಬಿಡಲಾಯಿತು. ಕಪು್ಪಕುಳಿ ರಹಸ್ಯ ಭೇದಿಸುವ ನಿಟ್ಟಿನಲ್ಲಿ ಈ ಉಪಗ್ರಹದಿಂದ ಹೆಚ್ಚಿನ ಅಧ್ಯಯನ ಸಾಧ್ಯವಾಗಲಿದೆ. ಐದು ವರ್ಷಗಳ ಅವಧಿಯಲ್ಲಿ ಹೊಸ ಮಾಹಿತಿ ಸಂಗ್ರಹಿಸುವಲ್ಲಿ ಇಸ್ರೋ ವಿಜ್ಞಾನಿಗಳು ನಿರತರಾಗಿದ್ದಾರೆ. ಆದಿತ್ಯ ಎಲ್1 ಉಪಗ್ರಹ ಸೂರ್ಯನ ಪ್ರಭಾವಲಯದ ಹೊರಗಿನಿಂದ ಸೌರಜ್ವಾಲೆ ಕುರಿತು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ಹಿಂದಿನ ಚಂದ್ರಯಾನದ ಯಶಸ್ಸಿನಿಂದ ವಿಶ್ವದ ಗಮನ ಸೆಳೆದಿದ್ದ ಭಾರತ ಈಗ ಚಂದ್ರಯಾನ-4 ಯೋಜನೆ ಮೂಲಕ ಚಂದ್ರನ ಅಂಗಳದಿಂದ ಮಣ್ಣಿನ ಮಾದರಿ ಹೊತ್ತುತರುವ ಸಾಹಸದ ಕೆಲಸಕ್ಕೆ ಮುಂದಾಗಿದೆ. ಜತೆಗೆ ಶುಕ್ರ ಗ್ರಹದ ಅನ್ವೇಷಣೆ ಕೈಗೊಳ್ಳುವ ಇಸ್ರೋ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದು, ಈ ಎರಡೂ ಯೋಜನೆಗಳಿಗೆ 1,236 ಕೋಟಿ ರೂ. ವೆಚ್ಚ ಮಾಡಲು ಸರ್ಕಾರ ಒಪ್ಪಿಗೆ ನೀಡಿರುವುದು ಇಸ್ರೋ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಭೂಮಿಕೆ ಸಿದ್ಧಪಡಿಸಲಾಗಿದೆ.