Betting Promotions : ಬೆಟ್ಟಿಂಗ್, ಗೇಮಿಂಗ್ ಮತ್ತು ಕ್ಯಾಸಿನೋ ಆ್ಯಪ್‌ಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದವರು ಭಾರಿ ಲಾಭ ಗಳಿಸಿದ್ದಾರೆ ಎಂಬ ಸ್ಫೋಟಕ ಸಂಗತಿ ಇದೀಗ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಹಿರಿಯ ಐಪಿಎಸ್ ಅಧಿಕಾರಿ ಮತ್ತು ಆರ್‌ಟಿಸಿ ಎಂಡಿ ವಿಶ್ವನಾಥ್ ಸಜ್ಜನರ್ ಅವರು 'ಸೇ ನೋ ಟು ಬೆಟ್ಟಿಂಗ್ ಆಪ್ಸ್' ಹ್ಯಾಶ್ಟ್ಯಾಗ್ ಹೆಸರಿನಲ್ಲಿ ನಡೆಸುತ್ತಿರುವ ಜಾಗೃತಿ ಅಭಿಯಾನವು ಸೆಲೆಬ್ರಿಟಿಗಳ ಸುತ್ತ, ಬೆಟ್ಟಿಂಗ್ ಆ್ಯಪ್ಸ್ ಕುಣಿಕೆಯನ್ನು ಬಿಗಿಗೊಳಿಸುತ್ತಿದೆ. ಹೈದರಾಬಾದ್ ಪೊಲೀಸರು ಬೆಟ್ಟಿಂಗ್ ಆ್ಯಪ್ ಮಾಡುವವರ ವಿರುದ್ಧ ಸಮರ ಸಾರಿದ್ದು, ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿ, ಹಣ ಗಳಿಸಿದವರ ಎದೆಯಲ್ಲಿ ನಡುಕ ಹುಟ್ಟುಸಿದೆ. ಪ್ರತಿ ಆ್ಯಪ್ ಅನ್ನು ಪ್ರಚಾರ ಮಾಡುವ ಮೂಲಕ ಅವರು ಗಳಿಸಿದ ಹಣದ ಮೊತ್ತವು ಇದೀಗ ಪುರಾವೆಗಳ ಸಮೇತ ಹೊರ ಬೀಳುತ್ತಿದೆ.
ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಕುರಿತ ಒಂದು ನಿಮಿಷದ ಪ್ರಚಾರದ ವಿಡಿಯೋಗೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಮತ್ತು ಯೂಟ್ಯೂಬರ್ಸ್ ಬರೋಬ್ಬರಿ 90 ಸಾವಿರ ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸುತ್ತಿದ್ದರು ಎಂದು ತಿಳಿದುಬಂದಿದೆ. ಅದರಲ್ಲೂ 1 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಅಥವಾ ಸಬ್ಸ್ಕ್ರೈಬರ್ಸ್ ಇದ್ದರೆ ತಿಂಗಳಿಗೆ 30 ಲಕ್ಷ ರೂ.ಗಳನ್ನು ಸಹ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಪಂಜಾಗುಟ್ಟ ಪೊಲೀಸರ ತನಿಖೆಯಲ್ಲಿ ಹೆಚ್ಚಿನವರು 15ಕ್ಕೂ ಹೆಚ್ಚು ವಿಡಿಯೋಗಳನ್ನು ಪ್ರಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ನಿರ್ವಾಹಕರು, ಪ್ರಸಿದ್ಧ ಯೂಟ್ಯೂಬರ್ ನಾ ಅನ್ವೇಶಣಗೆ ಒಟ್ಟು 1 ಕೋಟಿ ರೂಪಾಯಿ ನೀಡುವುದಾಗಿ ಅವರು ಹೇಳಿದ್ದರು ಎಂಬುದು ಗೊತ್ತಾಗಿದೆ. ಅದೇ ಸಮಯದಲ್ಲಿ ಅವರು ಬ್ಯಾಂಕಾಕ್ ಪಿಲ್ಲಾ ಯೂಟ್ಯೂಬರ್ (ಶ್ರವಣಿ) ಅವರನ್ನು ಸಹ ಸಂಪರ್ಕಿಸಿದ್ದರು. ಬೆಟ್ಟಿಂಗ್ ಅಪ್ಲಿಕೇಶನ್ ನಿರ್ವಾಹಕರು ತನಗೆ 70 ಲಕ್ಷ ರೂ.ಗಳನ್ನು ನೀಡುವುದಾಗಿ ಆಫರ್ ಮಾಡಿದ್ದರು ಎಂದು ಶ್ರವಣಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಗೇಮಿಂಗ್ ಆ್ಯಪ್‌ಗಳ ನಿರ್ವಾಹಕರು ಫಾಲೋವರ್ಸ್ ಸಂಖ್ಯೆ ದೊಡ್ಡದಾಗಿದ್ದರೆ ದೊಡ್ಡ ಮೊತ್ತದ ಹಣವನ್ನು ನೀಡಲು ಹಿಂಜರಿಯುತ್ತಿರಲಿಲ್ಲ. ಇನ್ಸ್ಟಾಗ್ರಾಂನಲ್ಲಿ 5 ಸಾವಿರ ಫಾಲೋವರ್ಸ್ ಇದ್ದರೂ ಸಹ ಅವರು ತಿಂಗಳಿಗೆ 20 ಸಾವಿರದವರೆಗೆ ಹಣವನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಖ್ಯಾತಿಯ ಆಧಾರದ ಮೇಲೆ ಹಣವನ್ನು ನೀಡಿರುವುದಾಗಿ ತಿಳಿದುಬಂದಿದೆ. ಈ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದವರು ಕನಿಷ್ಠ 50 ಲಕ್ಷ ರೂ. ಗಳಿಸಿದ್ದಾರೆ. ಪೊಲೀಸರು ಅವರ ಬ್ಯಾಂಕ್ ವಹಿವಾಟುಗಳನ್ನು ತನಿಖೆ ಮಾಡುತ್ತಿದ್ದಾರೆ. ಯಾರು ಯಾವ ವಿಡಿಯೋಗಳನ್ನು ಮಾಡಿದ್ದಾರೆ ಮತ್ತು ಅವರು ಎಷ್ಟು ಹಣವನ್ನು ಗಳಿಸಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿನ ಆ್ಯಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪಾಪ್-ಅಪ್ ಜಾಹೀರಾತುಗಳ ರೂಪದಲ್ಲಿ ಪ್ರಚಾರ ಮಾಡಲಾಗುತ್ತಿದೆ. ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಅವರು JungleRummy.com, ವಿಜಯ್ ದೇವರಕೊಂಡ A23, ಮಂಚು ಲಕ್ಷ್ಮಿ ಯೋಲೋ247.com, ಪ್ರಣೀತಾ ಫೇರ್‌ಪ್ಲೇ.ಲೈವ್ ಮತ್ತು ನಿಧಿ ಅಗರ್ವಾಲ್ ಜೀತ್ವಿನ್ ಸೈಟ್‌ಗಳು ಮತ್ತು ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ.
ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ನಿರೂಪಕರು ಅನನ್ಯ ನಾಗಲ್ಲ, ಸಿರಿ ಹನುಮಂತು, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣುಪ್ರಿಯಾ, ಹರ್ಷ ಸಾಯಿ, ಬೈಯಾ ಸಿ ಸೇರಿದಂತೆ ಅನೇಕರು ವಿವಿಧ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಸದ್ಯ ಪೊಲೀಸ್ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)