ಕನ್ನಡ ಸಾಹಿತ್ಯ ಪರಿಷತ್ತು ಈ ಬಾರಿಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್ 20ರಿಂದ 22ರವರೆಗೆ ನಡೆಸಲು ನಿರ್ಧರಿಸಿದೆ. ಇದರಲ್ಲಿ ಲಕ್ಷಾಂತರ ಕನ್ನಡಾಭಿಮಾನಿಗಳು ಉತ್ಸಾಹದಿಂದ ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಗುತ್ತಲದಲ್ಲಿ 5 ಕಿ.ಮೀ.ಗೂ ಅಧಿಕ ಮಾನವ ಸರಪಳಿ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರಿಗೆ ಮಂಡ್ಯದಲ್ಲಿ ನಡೆಯುತ್ತಿರುವ ಈ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈವಿಧ್ಯಮಯ ವಿಷಯಗಳನ್ನೊಳಗೊಂಡ 87 ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಇವುಗಳಲ್ಲಿ "ವಿಶ್ವ ಕನ್ನಡ ಕೂಟಗಳ" ಕುರಿತ ಪುಸ್ತಕವನ್ನು ಬಿಡುಗಡೆ ಮಾಡುವ ಮಹದಾಸೆ ಇದೆ.
ಕರ್ನಾಟಕದಿಂದ ಹೊರ ದೇಶಗಳಿಗೆ ಲಕ್ಷಾಂತರ ಜನರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಲಸೆ ಹೋಗಿದ್ದಾರೆ. ಆದರೂ ಅವರು ತಮ್ಮ ಮೂಲ ಬೇರನ್ನು ಮರೆತಿಲ್ಲ. ಭಾರತದಿಂದ ಸಾಗರದಾಚೆ ಸಾವಿರಾರು ಮೈಲು ದೂರವಿರುವ ದೇಶಗಳಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸಿ, ಕನ್ನಡದ ಕಂಪನ್ನು ಹರಡುವ ಪುಣ್ಯದ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ವಿದೇಶಗಳಲ್ಲಿರುವ ಎಲ್ಲಾ ಕನ್ನಡ ಸಂಘಗಳ ಕುರಿತು ಕ್ರೋಡೀಕರಣಗೊಂಡ ಸಮಗ್ರ ಮಾಹಿತಿ ಈಗಲೂ ಲಭ್ಯವಿಲ್ಲ. ಸಿಕ್ಕಿರುವ ಮಾಹಿತಿಗಳು ಸಹ ಅಪೂರ್ಣವಾಗಿವೆ. ಹೀಗಾಗಿ ಜಗತ್ತಿನಾದ್ಯಂತ ಪಸರಿಸಿರುವ ಕನ್ನಡ ಸಂಘಗಳ ಅಧಿಕೃತ ಮಾಹಿತಿಗಳನ್ನು, ಇತಿಹಾಸಗಳನ್ನು, ಸಂಗ್ರಹಿಸಿ, ಸಂಯೋಜಿಸಿ, ಪುಸ್ತಕವನ್ನು ಹೊರ ತರುವ ಅವಶ್ಯಕತೆ ಇದೆ.
ಕಸಾಪ ಅಧ್ಯಕ್ಷರಾಗಿರುವ ಡಾ.ಮಹೇಶ್ ಜೋಶಿ ವಿದೇಶಗಳಿಗೆ ಪಯಣ ಮಾಡುತ್ತಾ ಅಲ್ಲಿಯ ಕನ್ನಡ ಸಂಘಗಳೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ನೇಹ ಸೇತುವೆಯನ್ನು, ಬಾಂಧವ್ಯವನ್ನು ವೃದ್ಧಿಸಲು ತುಂಬಾ ಶ್ರಮ ವಹಿಸುತ್ತಿದ್ದಾರೆ. ಅವರು ಕೆಲ ವಾರಗಳ ಹಿಂದೆ ಅಮೆರಿಕಾದ ರಿಚ್ಮಂಡ್ನಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬೆಂಕಿ ಬಸಣ್ಣನವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಡಾ. ಮಹೇಶ್ ಜೋಶಿ ವಿಶ್ವ ಕನ್ನಡ ಕೂಟಗಳ ಪುಸ್ತಕವನ್ನು ಹೊರತರುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ವಿವರಿಸಿ, ಬೆಂಕಿ ಬಸಣ್ಣರಿಗೆ ಇದರ ಸಂಪೂರ್ಣ ನಾಯಕತ್ವವನ್ನು ವಹಿಸಿಕೊಂಡು, ವಿವಿಧ ದೇಶಗಳಿಂದ ಸಹ-ಸಂಪಾದಕರನ್ನು ಹುಡುಕಿ ಸಂಪಾದಕ ಮಂಡಳಿಯನ್ನು ರಚಿಸಿಕೊಂಡು ಈ ಪುಸ್ತಕವನ್ನು ಅತಿ ಶೀಘ್ರದಲ್ಲಿ ಹೊರ ತರಲು ವಿನಂತಿಸಿಕೊಂಡರು.
ಕನ್ನಡದ ಕಂಪನ್ನು ಹರಡಿಸಲು ಅವಿರತವಾಗಿ ದುಡಿಯುತ್ತಿರುವ ಬೆಂಕಿ ಬಸಣ್ಣನವರು ಈ ದೊಡ್ಡ ಜವಾಬ್ದಾರಿಯನ್ನು ಅತ್ಯಂತ ಸಂತೋಷದಿಂದ ಒಪ್ಪಿಕೊಂಡರು. ನೂರಾರು ದೇಶಗಳಲ್ಲಿರುವ ಕನ್ನಡ ಸಂಘಗಳನ್ನು ಸಂಪರ್ಕಿಸಿ, ಮಾಹಿತಿ ಸಂಗ್ರಹಿಸಿ ತುಂಬಾ ಸುಂದರವಾದ ವಿಶ್ವ ಕನ್ನಡ ಸಂಘಗಳ ಪುಸ್ತಕವನ್ನು ಮಂಡ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡುವ ಆತ್ಮವಿಶ್ವಾಸವನ್ನು ಬೆಂಕಿ ಬಸಣ್ಣ ವ್ಯಕ್ತಪಡಿಸಿದ್ದಾರೆ.