ನ್ಯೂಸ್

ಮಹಾಲಕ್ಷ್ಮಿ ಹತ್ಯೆ ಪ್ರಕರಣ: ಮಹಿಳೆ ದೇಹ ತುಂಡಾಗಿಸಿದ್ದು ಮೂವತ್ತಲ್ಲ 50!

ಬೆಂಗಳೂರು: ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಕೊಲೆ ಮಾದರಿಯಲ್ಲಿ ಬೆಂಗಳೂರಿನ ವೈಯಾಲಿಕಾವಲ್​ನಲ್ಲಿ ನಡೆದಿದ್ದ ಮಹಾಲಕ್ಷಿ್ಮ ಹತ್ಯೆ ಪ್ರಕರಣ ಮತ್ತಷ್ಟು ಭಯಾನಕ ಸ್ವರೂಪ ಪಡೆದುಕೊಳ್ಳುತ್ತಿದೆ. ದೇಹವನ್ನು 30 ತುಂಡುಗಳಾಗಿ ಕತ್ತರಿಸಿ ಫ್ರಿಜ್​ನಲ್ಲಿಟ್ಟಿದೆ ಎನ್ನಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಮೂವತ್ತಲ್ಲ 50ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿರುವುದು ಗೊತ್ತಾಗಿದೆ. ಇದರಿಂದ ದೇಹದ ಪೀಸ್​ಗಳನ್ನು ಶವಪರೀಕ್ಷೆ ನಡೆಸುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿತ್ತು.

ಏತನ್ಮಧ್ಯೆ ಮಹಾಲಕ್ಷ್ಮಿ ಪತಿ ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅತ್ಯಂತ ಭೀಕರವಾಗಿ ಹತ್ಯೆಗೈದು ದೇಹವನ್ನು ಪೀಸ್ ಪೀಸ್ ಮಾಡಿರುವ ಹಂತಕ, ಆ ತುಂಡುಗಳನ್ನು ಸೂಟ್​ಕೇಸ್​ನಲ್ಲಿ ತುಂಬಿ ಸಾಗಿಸಲು ಯತ್ನಿಸಿರುವುದು ಪೊಲೀಸರ ಪರಿಶೀಲನೆ ವೇಳೆ ತಿಳಿದುಬಂದಿದೆ. ಮನೆಯಲ್ಲಿ ಸೂಟ್​ಕೇಸ್ ಪತ್ತೆಯಾಗಿದ್ದು, ಅದರಲ್ಲೇ ಶವದ ತುಂಡುಗಳನ್ನು ಸಾಗಿಸಲು ಹಂತಕ ಸಂಚು ರೂಪಿಸಿರುವ ಸಾಧ್ಯತೆ ಇದೆ. ಆದರೆ, ಅದು ಸಾಧ್ಯವಾಗಿಲ್ಲ. ಕೂಡಲೇ ತಪ್ಪಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಫ್ರಿಡ್ಜ್​ನಲ್ಲಿ ದೇಹದ ತುಂಡುಗಳನ್ನು ತುಂಬಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹತ್ಯೆ ರಹಸ್ಯ ನಿಗೂಢವಾಗಿಯೇ ಉಳಿದಿದ್ದು, ವೈಯಕ್ತಿಕ ದ್ವೇಷ, ಕೌಟುಂಬಿಕ ಕಲಹ, ಅಕ್ರಮ ಸಂಬಂಧ ಹೀಗೆ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮಹಾಲಲಕ್ಷ್ಮಿಯನ್ನು ಯುವಕನೊಬ್ಬ ನಿತ್ಯ ಬೈಕ್​ನಲ್ಲಿ ಮನೆಯಿಂದ ಕರೆದೊಯ್ದು ವಾಪಸ್ ತಂದು ಬಿಡುತ್ತಿದ್ದ. ಈ ಬಗ್ಗೆ ಸಮೀಪದ ಪ್ರಾವಿಜನ್ ಸ್ಟೋರ್ ಮಾಲೀಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತಳ ಪತಿ ಹೇಮಂತ್ ದಾಸ್ ಹಾಗೂ ಆಕೆಯ ಕುಟುಂಬ ಸದಸ್ಯರು ನೆಲಮಂಗಲ ನಿವಾಸಿ ಅಶ್ರಫ್ ಮತ್ತು ಮಹಿಳೆಯ ಸಹೋದ್ಯೋಗಿಗಳಾದ ಮುಕ್ತ, ಶಶಿಧರ್ ಮತ್ತು ಸುನೀಲ್ ಎಂಬ ನಾಲ್ವರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಮೂವರು ಸಹೋದ್ಯೋಗಿಗಳು ಮಹಾಲಕ್ಷ್ಮಿ ಜತೆ ಜಗಳವಾಡಿಕೊಂಡಿದ್ದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.