ನ್ಯೂಸ್

ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ: ಇಂಡಿಯಾ ಎನರ್ಜಿ ಸಪ್ತಾಹ ಉದ್ಘಾಟಿಸಿ ಮಧ್ಯಾಹ್ನ ತುಮಕೂರಿಗೆ ಭೇಟಿ

ಬೆಂಗಳೂರು: ಕೇಂದ್ರ ಸರ್ಕಾರದ ಎರಡು ಮಹತ್ವದ ಇಲಾಖೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಬಳಿಕ ಹೆಲಿಕಾಪ್ಟರ್​ ಮೂಲಕ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರ(ಬಿಐಇಸಿ)ಕ್ಕೆ ತೆರಳಿದರು.

ಪ್ರಧಾನಿ ಮೋದಿ ಅವರಿಂದು ಬಿಐಇಸಿಯಲ್ಲಿ ನಡೆಯಲಿರುವ ಇಂಡಿಯಾ ಎನರ್ಜಿ ಸಪ್ತಾಹ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಈ ಕಾರ್ಯಕ್ರಮ ನಡೆಯಲಿದೆ. ಬಳಿಕ ತುಮಕೂರಿನ ಗುಬ್ಬಿಯಲ್ಲಿ ನಿರ್ಮಾಣವಾಗಿರುವ ಎಚ್​ಎಎಲ್​ ತಯಾರಿಕ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಲಘು ಉಪಯೋಗಿ ಹೆಲಿಕಾಪ್ಟರ್​ ಅನಾವರಣ ಹಾಗೂ ತುಮಕೂರು ಕೈಗಾರಿಕಾ ಟೌನ್​ಷಿಪ್​ ಯೋಜನೆ ಮತ್ತು ಜಲ ಜೀವನ್​ ಮಿಷನ್​ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇಂದು ಮಧ್ಯಾಹ್ನ 3.25 ಕ್ಕೆ ಬೆಂಗಳೂರಿನಿಂದ ಗುಬ್ಬಿ ಹೆಚ್ಎಎಲ್ ಹೆಲಿಪ್ಯಾಡ್​ಗೆ ಮೋದಿ ಆಗಮಿಸಲಿದ್ದಾರೆ. 3.30 ಕ್ಕೆ ಕಾರ್ಯಕ್ರಮದ ವೇದಿಕೆಗೆ ಆಗಮಿಸಲಿದ್ದು, 1 ಗಂಟೆಗಳ ವೇದಿಕೆ ಕಾರ್ಯಕ್ರಮದಲ್ಲಿ ‌ಭಾಗಿಯಾಗಲಿದ್ದಾರೆ. 35 ನಿಮಿಷಗಳ ಕಾಲ ಕಾರ್ಯಕ್ರಮವನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. 4.35 ಕ್ಕೆ ಕಾರ್ಯಕ್ರಮದ ವೇದಿಕೆಯಿಂದ ಎಚ್ಎಎಲ್ ಹೆಲಿಪ್ಯಾಡ್ ಕಡೆಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 4.40 ಕ್ಕೆ ಎಚ್ಎಎಲ್ ಹೆಲಿಪ್ಯಾಡ್ ತಲುಪಲಿರುವ ಮೋದಿ, 4.45 ಕ್ಕೆ ಎಚ್ಎಎಲ್ ಹೆಲಿಪ್ಯಾಡ್​ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. 5.15 ಕ್ಕೆ ಬೆಂಗಳೂರು ಏರ್ಪೋರ್ಟ್ ತಲುಪಲಿದ್ದು, ವಿಶೇಷ ವಿಮಾನದ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ತುಮಕೂರಿಗೆ ಮೋದಿ ಆಗಮನ ಹಿನ್ನೆಲೆ ಗುಬ್ಬಿ ಬಳಿ ನಿರ್ಮಾಣವಾಗಿರುವ ಎಚ್​​ಎಎಲ್ ಆವರಣದಲ್ಲಿ . ಎಡಿಜಿಪಿ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದೆ. ಎಡಿಜಿಪಿ-1, ಐಜಿ- 1, ಎಸ್​ಪಿ -7, ಡಿವೈಎಸ್​ಪಿ- 20, ಪೊಲೀಸ್ ಇನ್ಸ್​ಪೆಕ್ಟರ್​-55, ಪೊಲೀಸ್ ಸಿಬ್ಬಂದಿ-1200, ಸಬ್ ಇನ್ಸ್​ಪೆಕ್ಟರ್​-150, ಹೋಮ್ ಗಾರ್ಡ್ -400, ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿ- 14, ಕೆಎಸ್ಆರ್​ಪಿ ತುಕಡಿ-12 ಸೇರಿದಂತೆ ಒಟ್ಟು 3 ಸಾವಿರ ಪೊಲೀಸರು ಬಿಗಿಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ಮೇಲ್ನೋಟಕ್ಕೆ ಬಿಂಬಿತವಾಗಿದ್ದರೂ ಚುನಾವಣಾ ಲಾಭದ ಆಶಯ ಅಂತರ್ಗತವಾಗಿದೆ. ಇದೇ ತಿಂಗಳಲ್ಲಿ ಹ್ಯಾಟ್ರಿಕ್ ಭೇಟಿ ನಿರೀಕ್ಷೆಯಿದ್ದು, ಆ ಪೈಕಿ ಸೋಮವಾರ ಮೊದಲ ಕಾರ್ಯಕ್ರಮ ಆಯೋಜನೆಯಾಗಿದೆ. ಫೆ.13ಕ್ಕೆ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಉದ್ಘಾಟನೆ ಮತ್ತು ಫೆ.27ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುವ ನಿರೀಕ್ಷೆಯಿದೆ. ಹಸಿರು ಮಂತ್ರ ಮೋದಿ ತಂತ್ರವಾಗಿರುವ ಜತೆಗೆ ಸಮಗ್ರ, ಸುಸ್ಥಿರ ಅಭಿವೃದ್ಧಿ ಕೋಟೆ ಕಟ್ಟಿ ಮತಬೇಟೆಗೆ ಇಳಿಯುವ ಮೂಲಕ ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಕಾರ್ಯತಂತ್ರವಿದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.