ನ್ಯೂಸ್

ಬೆಂಗಳೂರು: ದಕ್ಷಿಣ ಭಾರತದ ಪ್ರಥಮ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಲೋಕಾರ್ಪಣೆ!, ಇದರ ವಿಶೇಷತೆಗಳೇನು?

ಬೆಂಗಳೂರು: ನಗರದ ರಾಗಿಗುಡ್ಡ - ಸಿಲ್ಕ್ ಬೋರ್ಡ್ ಜಂಕ್ಷನ್​ರೆಗೆ ನಿರ್ಮಾಣವಾಗಿರುವ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್​ನ ಪ್ರಾಯೋಗಿಕ ಸಂಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು(ಜುಲೈ17) ಚಾಲನೆ ನೀಡಿದರು.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಹೊಸ ಮಾದರಿಯಲ್ಲಿ ನಗರದ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಒಟ್ಟು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಡಬಲ್ ಡೆಕ್ಕರ್ ಪ್ಲೈಓವರ್ ಅನ್ನು ಲೋಕಾರ್ಪಣೆ ಮಾಡಿದರು. ಈ ಫ್ಲೈಓವರ್‌ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಜೋಡಿಸಲಿದೆ.

ಇದೇ ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ ಡಬಲ್ ಡೆಕರ್ ಮೇಲ್ಸೇತುವೆ ನಿರ್ಮಾಣವಾಗಿದ್ದು, ಮೆಟ್ರೋ ರೈಲು ಸಂಚಾರ ಇರುವ ಮೊದಲ ರೋಡ್ ಕಂ ರೇಲರ್ ಇದಾಗಿದೆ. ಈ ಡಬಲ್ ಡೆಕ್ಕರ್-ಫ್ಲೈಓವರ್ ಮೇಲಿನ ಡೆಕ್‌ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾರ್ ಇದ್ದರೆ. ಕೆಳಗಿನ ಡೆಕ್‌ನಲ್ಲಿ ವಾಹನ ಸಂಚಾರಕ್ಕಾಗಿ ಎಲಿವೇಟೆಡ್ ರಸ್ತೆಯನ್ನು ಒಳಗೊಂಡಿದೆ. ಇದು ದಕ್ಷಿಣ ಭಾರತದ ಮೊದಲ‌ ಡಬ್ಬಲ್ ಡೆಕ್ಕರ್ ರಸ್ತೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ನಾನು ಮಹಾರಾಷ್ಟ್ರದ ನಾಗ್ಪುರಕ್ಕೆ ಭೇಟಿ ನೀಡಿದಾಗ ಅಲ್ಲಿಯೂ ಇಂತಹ ಪ್ರಯೋಗಗಳಾಗಿರುವುನ್ನು ಗಮನಿಸಿದ್ದು, ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಇವು ಸಹಕಾರಿಯಾಗಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಅವರು ಹೇಳಿದರು.

ವಿಶ್ವದರ್ಜೆಯ ಈ ಪ್ಲೈಓವರ್'ನಿಂದ ಟ್ರಾಫಿಕ್ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿದೆ. ಅಲ್ಲದೆ ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ ಎಂದರು.

ರಾಗಿಗುಡ್ಡದಿಂದ ಇನ್ಮುಂದೆ ಸಿಗ್ನಲ್‌ ಇಲ್ಲದೆ ಸಿಲ್ಕ್ ಬೋರ್ಡ್ ಜಂಕ್ಷನ್​ಗೆ ಪ್ರಯಾಣಿಸಲು ಅವಕಾಶ ಸಿಗಲಿದೆ. ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಮೆಟ್ರೋ ನಿಲ್ದಾಣಗಳಲ್ಲಿಯೂ ಈ ರೀತಿಯ ಡಬಲ್ ಡೆಕ್ಕರ್ ಪ್ಲೈಓವರ್ ನಿರ್ಮಾಣ ಮಾಡಲಿದ್ದು, ಈ ಕುರಿತು ಚರ್ಚಿಸಿ ಕಾರ್ಯರೂಪಕ್ಕೆ ತರಲು ನಾವು ಬದ್ಧರಾಗಿದ್ದೇವೆ ಎಂದು ಡಿಕೆ ಶಿವಕುಮಾರ್​ ಅವರು ಭರವಸೆ ವ್ಯಕ್ತಪಡಿಸಿದರು.

ಡಬಲ್ ಡೆಕ್ಕರ್ ರಸ್ತೆಯ ವಿಶೇಷತೆಗಳೇನು?: ಬೆಂಗಳೂರಿನ ಬಹು ನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈ ಓವರ್ 3.36 ಕಿಲೋ ಮೀಟರ್‌ ಉದ್ದವಿದೆ. ಇದು ರಾಗಿಗುಡ್ಡ- ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ನಿರ್ಮಾಣವಾಗಿದೆ. 449 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಡಬಲ್ ಡೆಕ್ಕರ್ ಫ್ಲೈ ಓವರ್, ರಾಗಿಗುಡ್ಡ -ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ. ರಾಗಿಗುಡ್ಡದಿಂದ ಇನ್ಮುಂದೆ ಸಿಗ್ನಲ್‌ ಇಲ್ಲದೆ ಸಿಲ್ಕ್ ಬೋರ್ಡ್ ಜಂಕ್ಷನ್​ಗೆ ಪ್ರಯಾಣಿಸಲು ಅವಕಾಶ ಸಿಗಲಿದೆ.

ಈ ಡಬಲ್​​ ಡೆಕ್ಕರ್​ ಫ್ಲೈಒವರ್​​ನಲ್ಲಿ ಮೆಟ್ರೋ ರೈಲು ಹಾಗೂ ವಾಹನ ಸಂಚರಿಸುತ್ತದೆ. ಕೆಳರಸ್ತೆಯಿಂದ ಡಬ್ಬಲ್‌ ಡೆಕ್ಕರ್‌ನ ಮೊದಲ ಫ್ಲೈಓವರ್‌ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್‌ 16 ಮೀ. ಎತ್ತರದಲ್ಲಿದೆ. ಇದೇ ಮೊದಲ ಬಾರಿಗೆ ನಗರದ ಫ್ಲೈಓವರ್ ಮೇಲೆ ಮೆಟ್ರೋ ಲೇನ್ ಹಾದು ಹೋಗಿದೆ. ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಹೊಸೂರ್ ಲೇಔಟನ್ನು ಇದರಿಂದ ಅಡ್ಡಿಯಿಲ್ಲದೆ ತಲುಬಹುದು.