ವರುಣನ ಅಬ್ಬಕ್ಕೆ ಕೋಡಿ ಬಿದ್ದ ದೊಡ್ಡಗುಬ್ಬಿ ಕೆರೆ 
ನ್ಯೂಸ್

ಒಂದೇ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರ; ದೊಡ್ಡಗುಬ್ಬಿ ಕೆರೆ ಕೋಡಿ ಬಿದ್ದು ಅವಾಂತರ! | Bengaluru Rain

ಭಾರೀ ಮಳೆಗೆ ಉತ್ತರ ಬೆಂಗಳೂರಿನ ದೊಡ್ಡಗುಬ್ಬಿ ಕೆರೆ ಕೋಡಿ ಬಿದ್ದಿದೆ. 138.5 ಮಿಮೀ ಮಳೆಯಿಂದ ಮನೆ, ಶೆಡ್‌ಗಳಿಗೆ ನೀರು ನುಗ್ಗಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ.

Bengaluru Rain: ಬೆಂಗಳೂರು ಉತ್ತರ ಭಾಗದ ದೊಡ್ಡಗುಬ್ಬಿಯಲ್ಲಿ ಸುರಿದ ಭಾರೀ ಮಳೆ ಒಂದೆಡೆ ಜನರಿಗೆ ಖುಷಿ ತಂದಿದ್ದರೆ, ಮತ್ತೊಂದೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಭರ್ಜರಿ ಮಳೆಗೆ ದೊಡ್ಡಗುಬ್ಬಿ ಕೆರೆ ತುಂಬಿ ಕೋಡಿ ಬಿದ್ದಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ನುಗ್ಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ಪ್ರಕಾರ, ದೊಡ್ಡಗುಬ್ಬಿಯಲ್ಲಿ ಬರೋಬ್ಬರಿ 138.5 ಮಿಮೀ ಮಳೆ ದಾಖಲಾಗಿದೆ. ಇದು ಅಂದು ಬೆಂಗಳೂರಿನಲ್ಲಿ ದಾಖಲಾದ ಗರಿಷ್ಠ ಮಳೆಯಾಗಿದೆ.

ಕೆರೆ ಕೋಡಿ ಬಿದ್ದು ಮನೆ, ಶೆಡ್‌ಗಳಿಗೆ ನುಗ್ಗಿದ ನೀರು

ಭಾರೀ ಮಳೆಗೆ ದೊಡ್ಡಗುಬ್ಬಿ ಕೆರೆ ತುಂಬಿ ಕೋಡಿ ಬಿದ್ದಿದೆ. ಪರಿಣಾಮ, ಕೆರೆ ಸುತ್ತಮುತ್ತಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. 20ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್‌ಗಳು ಹಾಗೂ ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.

ಮುಖ್ಯ ರಸ್ತೆಗಳಲ್ಲೂ ನೀರೇ ನೀರು

ರಾಜಕಾಲುವೆ ಹಾಗೂ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಹಲವು ಕಡೆ ನೀರು ನಿಂತಿದೆ. ಕಣ್ಣೂರು ಜಂಕ್ಷನ್, ಬಾಗಲೂರು ರಸ್ತೆ ಹಾಗೂ ಹೆಣ್ಣೂರು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಭಾರೀ ತೊಂದರೆಯಾಗಿದೆ. ಕೆಸರು ಹಾಗೂ ನೀರು ತುಂಬಿದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪರದಾಡಿದ್ದಾರೆ. ಕೆಲವೆಡೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಸುತ್ತಮುತ್ತಲ ಪ್ರದೇಶಗಳಲ್ಲೂ ಭಾರೀ ಮಳೆ

ದೊಡ್ಡಗುಬ್ಬಿ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಲ್ಲೂ ಭರ್ಜರಿ ಮಳೆಯಾಗಿದೆ. ಹೊರಮಾವಿನಲ್ಲಿ 99 ಮಿಮೀ, ಜಕ್ಕೂರು ಹಾಗೂ ಯಲಹಂಕದಲ್ಲಿ 78ರಿಂದ 83 ಮಿಮೀವರೆಗೆ ಮಳೆ ದಾಖಲಾಗಿದೆ.

ಇದನ್ನೂ ಓದಿ: ಹುರಿಗಡಲೆ vs ವೇ ಪ್ರೋಟೀನ್; ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಲು ಯಾವುದು ಬೆಸ್ಟ್? | Roasted Gram vs Whey Protein

ಒಂದೇ ರಾತ್ರಿ ಸುರಿದ ಭಾರೀ ಮಳೆಗೆ ದೊಡ್ಡಗುಬ್ಬಿ ಸೇರಿದಂತೆ ಉತ್ತರ ಬೆಂಗಳೂರಿನ ಹಲವು ಭಾಗಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.