ನ್ಯೂಸ್

ಮಹಿಳೆಯರ ಸುರಕ್ಷತೆಗೆ 'ಸೇಫ್ಟಿ ಐಸ್​ಲ್ಯಾಂಡ್' ಪ್ರಾರಂಭ; ಏನಿದು ಪೊಲೀಸರ ಹೊಸ ಕ್ರಮ? ಇಲ್ಲಿದೆ ಪೂರ್ಣ ಮಾಹಿತಿ…

ಬೆಂಗಳೂರು: ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಸಾರಿಗೆ ಬಸ್ಸಿನಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಜತೆಗೆ ಮಹಿಳೆಯರ ಸುರಕ್ಷತೆಗಾಗಿ ಇಲಾಖೆ ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.

ನಗರದ ಹಲವೆಡೆ ಸೇಫ್ಟಿ ಐಸ್​ಲ್ಯಾಂಡ್ ಸ್ಥಾಪನೆ

ಮಹಿಳೆಯರ ಸುರಕ್ಷತೆಗಾಗಿ 'ಸೇಫ್ಟಿ ಐಸ್ ಲ್ಯಾಂಡ್' ಎಂದು ಬೆಂಗಳೂರು ಪೊಲೀಸರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಮಹಿಳೆಯರು ಹೆಚ್ಚು ಓಡಾಡುವ ಸ್ಥಳಗಳು ಸೇರಿದಂತೆ 30 ಸ್ಥಳಗಳಲ್ಲಿ ಸೇಫ್ಟಿ ಐಸ್‌ಲ್ಯಾಂಡ್ ಸ್ಥಾಪಿಸಲಾಗಿದೆ. ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಸಾರ್ವಜನಿಕವಾಗಿ ಜಾಗೃತಿ ಮೂಡಿಸಿದ್ದಾರೆ.

ಸಂಕಷ್ಟದ ಸಂದರ್ಭದಲ್ಲಿ ಮಹಿಳೆಯರು ಸೇಫ್ಟಿ ಐಸ್​ಲ್ಯಾಂಡ್ ಮೂಲಕ ಬಟನ್ ಒತ್ತಿದರೆ ಕೂಡಲೇ ಅಲ್ಲಿಗೆ ಪೊಲೀಸರು ಬಂದು ರಕ್ಷಣೆ ನೀಡುವಂತಹ ವ್ಯವಸ್ಥೆ ರೂಪಿಗೊಳಿಸಲಾಗಿದೆ. ಏನೇ ಸಮಸ್ಯೆಯಾದರೂ ನೂತನ ವ್ಯವಸ್ಥೆ ಮೂಲಕ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.

ಹೇಗೆ ಕೆಲಸ ಮಾಡುತ್ತದೆ?

ಬೆಂಗಳೂರು ನಗರದದ್ಯಾಂತ ಸುಮಾರು 30 ಪ್ರಮುಖ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸೇಫ್ಟಿ ಐಸ್​ಲ್ಯಾಂಡ್ ಸ್ಥಾಪಿಸಲಾಗಿದೆ. ಸೇಫ್ಟಿ ಐಸ್​ಲ್ಯಾಂಡ್​ನಲ್ಲಿರುವ ಒಂದು ಬಟನ್ ಅನ್ನು ಒತ್ತಿದರೆ, ಕಮಾಂಡ್‌ ಸೆಂಟರ್‌ಗೆ ಕೂಡಲೇ ಅಲರಾಂನಿಂದ ಮಾಹಿತಿ ರವಾನೆಯಾಗುತ್ತದೆ. ತಕ್ಷಣವೇ ಕಮಾಂಡ್ ಸೆಂಟರ್​ನವರು ಹೊಯ್ಸಳ ವಾಹನವನ್ನು ಮಹಿಳೆಯರ ನೆರವಿಗೆ ಕಳುಹಿಸಿಕೊಡುತ್ತಾರೆ.