ನ್ಯೂಸ್

Bengaluru ಇಷ್ಟು ಬೆಳೆಯಲು ಕಾರಣ ಉತ್ತರ ಭಾರತೀಯರು; ಸಿಲಿಕಾನ್​ ಸಿಟಿ ಕುರಿತು ಯುವತಿಯ ಶಾಕಿಂಗ್​ ಹೇಳಿಕೆ

ಬೆಂಗಳೂರು: ಐಟಿ ಸಿಟಿ, ಗಾರ್ಡನ್​ ಸಿಟಿ, ಸಿಲಿಕಾನ್​ ಸಿಟಿ ಎಂದೆಲ್ಲಾ ಖ್ಯಾತಿ ಪಡೆದಿರುವ ನಮ್ಮ ಬೆಂಗಳೂರು (Bengaluru) ಹೊರರಾಜ್ಯದ ಜನರಿಗೆ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದ್ದು, ಆಶ್ರಯ ನೀಡಿದೆ. ಉದ್ಯಮಿಗಳು ಸೇರಿದಂತೆ ಹಲವರಿಗೆ ಬೆಂಗಳೂರು ಅಚ್ಚುಮೆಚ್ಚಾಗಿದ್ದು, ಸದಾ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಇಂದು ಕೋಟ್ಯಧೀಶರಾಗಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ. ಆದರೆ, ಇದೇ ಬೆಂಗಳೂರು ಉದ್ದಾರ ಆಗುವುದಕ್ಕೆ ಉತ್ತರ ಭಾರತೀಯರು ಕಾರಣ ಎಂದು ಯುವತಿಯೊಬ್ಬಳು ಮಾತನಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ವೋಕ್​ ಎಮಿನೆಂಟ್​ ಎಂವ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್​ ಮಾಡಲಾಗಿದ್ದು, ಯುವತಿ ನೀಡಿರುವ ಹೇಳಿಕೆ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಯುವತಿಯ ಹೇಳಿಕೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಯುವಕನೋರ್ವ ರಸ್ತೆಯಲ್ಲಿ ಸಾಗುತ್ತಿದ್ದ ಉತ್ತರ ಭಾರತ ಮೂಲದ ಯುವತಿಗೆ ಬೆಂಗಳೂರಿನ (Bengaluru) ಶಾಕಿಂಗ್​ ಕಲ್ಚರ್​ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವಂತೆ ಕೇಳುತ್ತಾನೆ. ಇದಕ್ಕೆ ಉತ್ತರಿಸಿದ ಯುವತಿ, ನನಗೆ ಇಲ್ಲಿನ ಶಾಕಿಂಗ್ ಕಲ್ಚರ್​ ಬಗ್ಗೆ ತಿಳಿದಿಲ್ಲ. ಆದರೆ, ಇಲ್ಲಿನ ಜನರು ಉತ್ತರ ಭಾರತೀಯರನ್ನು ದ್ವೇಷಿಸುತ್ತಾರೆ. ಅದನ್ನ ನಾನು ಗಮನಿಸಿದ್ದೇನೆ. ನಾವು ಉತ್ತರದಿಂದ ಬಂದವರು ಎಂದು ತಿಳಿದಾಗ ಜನರು ವಿಭಿನ್ನವಾಗಿ ವರ್ತಿಸಲು ಶುರು ಮಾಡುತ್ತಾರೆ. ಆಟೋವಾಲಾಗಳು ನಮಗೆ ಹೆಚ್ಚಿನ ಬಾಡಿಗೆಯನ್ನು ಕೇಳುತ್ತಾರೆ.

ಈ ಹಿಂದಿ ಜನರು ಎಲ್ಲಿಂದಲೋ ಬಂದವರು ಎಂದೆಲ್ಲಾ ಹೇಳುತ್ತಾರೆ. ನಾನು ಬೆಂಗಳೂರುನ್ನು ಪ್ರೀತಿಸುತ್ತೇನೆ. ಆದರೆ, ಇಲ್ಲಿನ ಜನ ಮಾತ್ರ ನಮ್ಮೊಂದಿಗೆ ವಿಚಿತ್ರವಾಗಿ ವರ್ತಿಸುತ್ತಾರೆ. ವಾಸ್ತವ ಏನಂದ್ರೆ ಬೆಂಗಳೂರು ಈ ಮಟ್ಟಿಗೆ ಬೆಳೆದದ್ದು ಮಾತ್ರ ಉತ್ತರ ಭಾರತೀಯರಿಂದಲೇ. ಈ ವಾಸ್ತವವನ್ನು ಒಪ್ಪಿಕೊಳ್ಳಲು ಇಲ್ಲಿನ ಜನ ತಯಾರಿಲ್ಲ ಎಂದು ಯುವತಿ ಹೇಳಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, 679.8K ವೀವ್ಸ್ ಹಾಗೂ ಸಾವಿರಕ್ಕೂ ಅಧಿಕ ಕಮೆಂಟ್ಸ್​​ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕಂಪನಿ ಹಾಗೂ ಸ್ಟಾರ್ಟಪ್​ನ ಸಂಸ್ಥಾಪಕರು ಬೇರೆ ರಾಜ್ಯಗಳಿಂದ ಬಂದವರು. ಯುವತಿ ನೀಡಿರುವ ಹೇಳಿಕೆ ಸರಿ ಇರಬಹುದು. ಆದರೆ, ಆಕೆ ನೀಡಿರುವ ಹೇಳಿಕೆ ಇದು ಮೊದಲ ಹಂತದಲ್ಲಿ ಚರ್ಚೆಯ ವಿಷಯವಾಗಬಾರದಿತ್ತು. ಭಾಷೆಯ ಹೆಸರಲ್ಲಿ ಯಾಕೆ ಈ ಅನಗತ್ಯ ವಿಭಜನೆ. ಸ್ಥಳೀಯ ಕನ್ನಡಿಗರು ಈ ವಿಭಜನೆಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಹಾಕಿದ್ದಾರೆ. 

ಆಕೆಯ ಹೇಳಿಕೆಯನ್ನು ಗಮನಿಸಿದರೆ ಜನರು ಅವರನ್ನು ಹೊರಗಿನವರು ಎಂದು ಕರೆಯಲು ಮತ್ತು ಅವರನ್ನು ವಿಭಿನ್ನವಾಗಿ ಪರಿಗಣಿಸಲು ಇದು ಮುಖ್ಯ ಕಾರಣವಾಗಿದೆ. ನನ್ನ ಬಿಹಾರಿ ಸ್ನೇಹಿತ ಅಲ್ಪಮಟ್ಟದಲ್ಲಿ ಕನ್ನಡ ಮಾತನಾಡುತ್ತಾನೆ. ಅವನಿಗೆ ಜನರು ಗೌರವವನ್ನು ಕೊಡುತ್ತಾರೆ. ಆದರೆ, ನಾವೇನಾದರೂ ಕೇಳಿದರೆ ಏನನ್ನೂ ಮಾತನಾಡುವುದಿಲ್ಲ ಎಂದು ಮತ್ತೊಬ್ಬರು ಯುವತಿಯ ಹೇಳಿಕೆಯನ್ನು ಬೆಂಬಲಿಸಿ ಕಮೆಂಟ್​ ಹಾಕಿದ್ಧಾರೆ.