ನ್ಯೂಸ್

ನೀವು ಮಾಡಿದ ಚಪಾತಿ ರೌಂಡ್​ ಶೇಪ್​ನಲ್ಲಿದೆಯೇ? ಪರಿಶೀಲಿಸಲು ಬಂತು AI ಟೂಲ್​; ಬೆಂಗಳೂರು ಟೆಕ್ಕಿ ಸಾಧನೆಗೆ ನೆಟ್ಟಿಗರು ಫಿದಾ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ (AI) ವ್ಯಾಪ್ತಿ ಎಲ್ಲಾ ಕ್ಷೇತ್ರಕ್ಕೂ ವಿಸ್ತರಿಸಿದ್ದು, ಎಐ ನಮ್ಮ ದೈನಂದಿನ ಭಾಗವಾಗಿಬಿಟ್ಟಿದೆ. ಅದು ಎಷ್ಟರಮಟ್ಟಿಗೆ ಎಂದರೆ ನಾವು ಮನೆಯಲ್ಲಿ ಮಾಡುವ ಚಪಾತಿ ಅಥವಾ ರೊಟ್ಟಿ ರೌಂಡ್​ ಶೇಪ್​ನಲ್ಲಿ ಇದೆಯಾ ಎಂಬುದನ್ನು ಪರಿಶೀಲಿಸಲು ಎಐ ಟೂಲ್​ ಬಂದಿದೆ. ಆಶ್ಚರ್ಯವೆನಿಸಿದರು ಇದು ನಿಜವಾಗಿದೆ.

ಬೆಂಗಳೂರು ಮೂಲದ ಐಐಟಿ ಪದವಿಧರರೊಬ್ಬರು ರೊಟ್ಟಿ ಹಾಗೂ ಚಪಾತಿ ಗುಂಡಾಗಿದೆಯೇ ಎಂದು ಪರೀಕ್ಷಿಸಲು ಎಐ (AI) ಟೂಲ್‌ ಒಂದನ್ನು ಅಭಿವೃದ್ಧಿಪಡಿಸಿದ್ದು, ಈ ಸಾಧನದ ಮೂಲಕ ನೀವು ಮಾಡಿದ ರೊಟ್ಟಿ ಅಥವಾ ಚಪಾತಿ ಎಷ್ಟು ಗುಂಡಾಗಿದೆ ಎಂಬುದನ್ನು ಮೌಲ್ಯಮಾಪನ ಮಾಡಬಹುದಾಗಿದೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಐಐಟಿ ಖರಗ್‌ಪುರ ಪದವೀಧರರಾಗಿರುವ ಬೆಂಗಳೂರು ಮೂಲದ ಡೆವಲಪರ್ ಅನಿಮೇಶ್ ಚೌಹಾಣ್‌ ರೊಟ್ಟಿ ಮತ್ತು ಚಪಾತಿ ರೇಟ್ ಮಾಡಲು ಅನುವು ಮಾಡಿಕೊಡುವ ತಂತ್ರಜ್ಞಾನದೊಂದಿಗೆ ಬರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಎಐ (AI) ಉಪಕರಣವು ಮೊದಲು ರೊಟ್ಟಿ ಅಥವಾ ಚಪಾತಿಯ ರೌಂಡ್‌ ಶೇಪ್‌ನ್ನು ಸ್ಕ್ಯಾನ್ ಮಾಡುತ್ತದೆ, ನಂತರ ಅದಕ್ಕೆ 100 ಕ್ಕೆ ಇಂತಿಷ್ಟು ಅಂಕವನ್ನು ನೀಡುತ್ತದೆ.

ತಮ್ಮ ಬಿಡುವಿನ ಸಮಯದಲ್ಲಿ ಈ ಟೂಲ್‌ ಅಭಿವೃದ್ಧಿಡಿಸಿದ್ದು, ಇದೀಗ ಈ ಎಐ (AI) ಪರಿಕರದ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಕುತೂಹಲಕಾರಿ ವಿಷಯವೆಂದರೆ ಇದಕ್ಕೆ ಹೂಡಿಕೆದಾರರ ಬಗ್ಗೆಯೂ ಚರ್ಚೆಗಳು ಪ್ರಾರಂಭವಾಗಿವೆ. rotichecker.ai ಖಾತೆಯಲ್ಲಿ ಇದರ ಲಿಂಕ್​ ಶೇರ್ ಮಾಡಿದ್ದಾರೆ. ಅನೇಕರು ತಮ್ಮ ಮನೆಯಲ್ಲಿ ಮಾಡಿರುವ ಚಪಾತಿ ಹಾಗೂ ರೊಟ್ಟಿಯ ಫೋಟೋಗಳ ಮೌಲ್ಯಮಾಪನವನ್ನು ಅಪ್ಲೋಡ್ ಮಾಡಿದ್ದಾರೆ. ಜನವರಿ 31ರಂದು ಈ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದ್ದು, ಈವರೆಗೂ 468.7k ವೀವ್ಸ್ ಪಡೆದುಕೊಂಡಿದೆ. ಸದ್ಯ ಈ ಪೋಸ್ಟ್ ವೈರಲ್​ ಆಗಿದೆ.