ನ್ಯೂಸ್

ಹಿಟ್​ ಆ್ಯಂಡ್​​ ರನ್​ ಕೇಸ್​: ಕಾರು ಮಾಹಿತಿ ಬೆನ್ನತ್ತಿದ್ದ ಬೆಂಗ್ಳೂರ್​ ಪೊಲೀಸ್ರಿಗೆ ಸಿಕ್ಕಿದ್ದು ಶಿಲ್ಪಾ ಶೆಟ್ಟಿ ದಂಪತಿ ಪರಿಚಯ!

ಬೆಂಗಳೂರು: ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಆರೋಪಿ ಕಾರು ಚಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಅಚ್ಚರಿಯ ವಿಷಯವೇನೆಂದರೆ ಹಿಟ್​ ಅಂಡ್​ ರನ್​ ಮಾಡಿದ ಕಾರು, ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗು ಉದ್ಯಮಿ ರಾಜ್​ ಕುಂದ್ರಾಗೆ ಸೇರಿದ್ದಾಗಿದೆ.

AUDI R8 ಹೆಸರಿನ ಐಶಾರಾಮಿ ಕಾರು ಫೆ. 7ರ ಮಧ್ಯಾಹ್ನದಂದು ಆಟೋ ಮತ್ತು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಜಾಗರೂಕ ಚಾಲನೆಯಿಂದ ಆರೋಪಿ ಮಹಮ್ಮದ್​ ಸದ್ದಾಂ ಅಪಘಾತ ಎಸಗಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಕಾರಿನ ಬಗ್ಗೆ ಆರ್​ಟಿಒ ದಾಖಲೆಗಳನ್ನು ಪರಿಶೀಲಿಸಿದಾಗ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ ಕಾರು ಎಂಬುದು ಪತ್ತೆಯಾಗಿದೆ.

ಎರಡು ತಿಂಗಳ ಹಿಂದೆಯೇ ಮುಂಬೈ ಕಾರು ಡೀಲರ್​ ಮೂಲಕ ಬೆಂಗಳೂರು ಮೂಲದ ಕಾರು ಡೀಲರ್​ಗೆ ರಾಜ್​ ಕುಂದ್ರಾ ಕಾರು ಮಾರಾಟ ಮಾಡಿದ್ದರು. ಆದರೆ, ಇನ್ನೂ ಹೊಸ ಖರೀದಿದಾರನ ಹೆಸರಿಗೆ ದಾಖಲೆಗಳು ವರ್ಗಾವಣೆಯಾಗಿಲ್ಲ. ಹೀಗಾಗಿ, ಮಾರಾಟವಾಗಿ ಎರಡು ತಿಂಗಳು ಆದರೂ ಕಾರಿನ ದಾಖಲೆಗಳು ಇನ್ನು ರಾಜ್ ಕುಂದ್ರಾ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ.

RTO ಮೂಲಕ ಕಾರು ಮಾಲೀಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಎಂಬುದು ಸಂಚಾರ ತನಿಖೆ ವೇಳೆ ಪತ್ತೆಯಾಗಿದೆ. ಸಿಸಿ ಕ್ಯಾಮರಾಗಳ ದೃಶ್ಯಾವಳಿ ಆಧರಿಸಿ ಐಶಾರಾಮಿ ಕಾರು ಮತ್ತು ಚಾಲಕ ಮಹಮ್ಮದ್​ನನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿ ಬಿಟಿಎಂ 2ನೇ ಹಂತದ ನಿವಾಸಿ.

ಬಂಧಿಯಾಗಿರುವ ಮಹ್ಹಮ್ಮದ್​ ವಿರುದ್ಧ ಈ ಮೊದಲೇ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. (ದಿಗ್ವಿಜಯ ನ್ಯೂಸ್​)