ನ್ಯೂಸ್

ಬಿಎಂಟಿಸಿ ಬಸ್​ನಿಂದ ಸರಣಿ ಅಪಘಾತ: ಟ್ರಾಫಿಕ್​ನಲ್ಲಿ ನಿಂತಿದ್ದ ಬೈಕ್ ಸವಾರ​ ದುರಂತ ಸಾವು

ಬೆಂಗಳೂರು: ಬಿಎಂಟಿಸಿ ಬಸ್​ನಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್​ ಸವಾರನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಭಾರತೀಯ ಸಿಟಿ ಕ್ರಾಸ್ ಬಳಿ ನಡೆದಿದೆ.

ಸವಾರ ಅಯೂಬ್ (35) ಮೃತ ಬೈಕ್​ ಸವಾರ. ನಿನ್ನೆ (ಜ.27) ಸಂಜೆ ರಾತ್ರಿ 9ರ ಸುಮಾರಿಗೆ ಘಟನೆ ನಡೆದಿದೆ. ನಾಗವಾರ ಹಾಗೂ ಯಲಹಂಕ ಮಾರ್ಗವಾಗಿ ಸಂಚರಿಸುತ್ತಿದ್ದ 290 ED ಬಸ್​ನಿಂದ ಸರಣಿ ಅಪಘಾತ ನಡೆದಿದೆ.

ಬೆಳ್ಳಳ್ಳಿ ಕಡೆಯಿಂದ ಹೆಗಡೆನಗರ ಮಾರ್ಗವಾಗಿ ಬಸ್​ ಚಲಿಸುತ್ತಿತ್ತು. ಈ ವೇಳೆ ಭಾರತೀಯ ಸಿಟಿ ಜಂಕ್ಷನ್ ಬಳಿ ಟ್ರಾಫಿಕ್ ವಾರ್ಡನ್ ಸೂಚನೆ ಮೇರೆಗೆ ಬೈಕ್​ಗಳು ನಿಂತಿದ್ದವು. ಹಿಂದೆಯಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದು ಬೈಕ್​ಗಳನ್ನು ಎದುರುಗಡೆ ಇದ್ದ ರಸ್ತೆಗೆ ತಳ್ಳಿಕೊಂಡು ಹೋಯಿತು.

ಬಿಎಂಟಿಸಿ ಬಸ್​ ಡಿಕ್ಕಿಯ ರಭಸಕ್ಕೆ ಎರಡು ಕಾರು, ಮೂರು ಬೈಕ್​ಗಳು ಜಖಂಗೊಂಡಿವೆ. ಘಟನಯಲ್ಲಿ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅಯೂಬ್ ಎಂಬಾತ ಮೃತಪಟ್ಟಿದ್ದಾನೆ.

ಉಳಿದ ರಫಿಯುಲ್ಲಾ ಖಾನ್, ಮುಸಾದ್ಧೀಕ್, ಮುನ್ನಾವರ್​ಗೆ ಗಂಭೀರ ಗಾಯವಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಹಾಗೂ ಬಸ್ ಅನ್ನು ವಶಕ್ಕೆ ಪಡೆದು ಸಂಚಾರಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬ್ರೇಕ್ ವೈಫಲ್ಯದಿಂದ ಸಂಭವಿಸಿದ್ದಾಗಿ ಚಾಲಕ ಗೋವಿಂದರಾಜು ಹೇಳಿಕೆ ನೀಡಿದ್ದಾನೆ. (ದಿಗ್ವಿಜಯ ನ್ಯೂಸ್​)