ನ್ಯೂಸ್

ಬಳ್ಳಾರಿಯ ಗಣಿಯಲ್ಲಿ ಅವೈಜ್ಞಾನಿಕ ಸ್ಫೋಟ; ಮಂಜಿನ ರೀತಿ ತುಂಬಿದ ಧೂಳು…

ಬಳ್ಳಾರಿ: ಬಳ್ಳಾರಿಯ ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ದೊಡ್ಡ ಮಟ್ಟದ ಬ್ಲಾಸ್ಟ್ ನಡೆಸಲಾಗಿದೆ. ಇದರಿಂದಾಗಿ ದೊಡ್ಡ ಮಟ್ಟದ ಶಬ್ದ ಉಂಟಾಗಿದ್ದು ಕಲ್ಲುಗಳ ಚೂರುಗಳೂ ಆಕಾಶಕ್ಕೆ ಸಿಡಿದಿದ್ದು ಜನರು ಕಕ್ಕಾಬಿಕ್ಕಿಯಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತಾಲೂಕಿನ ಹಳೆಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬ್ಲಾಸ್ಟ್​ನಿಂದ ಗ್ರಾಮದಲ್ಲಿ ಭೂಕಂಪದ ಅನುಭವ ಉಂಟಾಗಿದ್ದು, ಗ್ರಾಮದ ತುಂಬೆಲ್ಲ ಮಂಜಿನಂತೆ ಧೂಳು ಸುತ್ತುವರೆದಿದೆ.

ಗ್ರಾಮಸ್ಥರ ಮುತ್ತಿಗೆ

ಈ ಘಟನೆ ನಡೆಯುತ್ತಿದ್ದಂತೆಯೇ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಹಳೆಕೋಟೆ ಗ್ರಾಮದಲ್ಲಿರುವ ಕಲ್ಯಾಣಿ ಕ್ರಷರ್​ ಅವೈಜ್ಞಾನಿಕ ಗಣಿಗಾರಿಕೆ ನಡೆಸಿದೆ ಎಂದು ಆರೋಪಿಸಲಾಗಿದೆ.

ನಡುಗಿತಾ ಭೂಮಿ?

ಗುಡ್ಡದಿಂದ ಕಲ್ಲುಗಳನ್ನು ತೆಗೆಯಲು ಬಂಡೆಗಳಲ್ಲಿ ಬ್ಲಾಸ್ಟ್ ಮಾಡೋದು ಸಾಮಾನ್ಯ. ಆದರೆ ನಿನ್ನೆ ಸಂಜೆ ಕೊಳವೆಬಾವಿ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಬೋರ್ ಹಾಕಿ ಬ್ಲಾಸ್ಟಿಂಗ್ ಪೌಡರ್ ಸೇರಿದಂತೆ ನಿಯಮ ಬಾಹಿರ ರಸಾಯನಿಕ ತುಂಬಿ ಬಂಡೆಗಳನ್ನು ಬ್ಲಾಸ್ಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿರುವ ಕಾರಣ ಮನೆಗಳಲ್ಲಿ ‌ಇರುವ ವಸ್ತುಗಳು ಚೆಲ್ಲಾಪಿಲ್ಲಿ ಆಗಿವೆ. ಬ್ಲಾಸ್ಟ್ ವೇಳೆ ಮನೆಗಳು ನಡುಗಿದ್ದು ಕಲ್ಲುಪುಡಿಯ ಹೊಗೆ ಮತ್ತು ಧೂಳು ಹಳೇಕೋಟೆ ಗ್ರಾಮವೆನಲ್ಲ ತುಂಬಿಕೊಂಡಿದೆ. ಈ ಹಿನ್ನೆಲೆಯಲ್ಲಿ ತೆಕ್ಕಲಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.