ನ್ಯೂಸ್

ಯೇಹೇ.. ಕರೊನಾ ಏನ್ ಮಹಾ.. ವೋಡ್ಕಾ ಕುಡೀರಿ, ಟ್ರ್ಯಾಕ್ಟರ್​ಗಳಲ್ಲಿ ದುಡೀರಿ, ಆಮೇಲೆ ಆವಿಸ್ನಾನ ಮಾಡಿ- ಕರೊನಾ ಓಡಿಸೋಕೆ ಇಷ್ಟು ಸಾಕು ಎಂದ ಬೆಲಾರಸ್ ಪ್ರೆಸಿಡೆಂಟ್​!

ಮಿನ್ಸ್ಕ್​: ಕರೊನಾ COVID19 ವೈರಸ್ ಸೋಂಕು ಹರಡದಂತೆ ಜಗತ್ತು ಹರಸಾಹಸ ಪಡುತ್ತಿದ್ದರೆ, ಬೆಲಾರಸ್​ನ ಪ್ರೆಸೆಂಡೆಂಟ್ ಮಾಡ್ತೀರೋದೇನು? ಯೇಹೇ.. ಕರೊನಾ ಏನ್ ಮಹಾ.. ವೋಡ್ಕಾ ಕುಡೀರಿ, ಟ್ರ್ಯಾಕ್ಟರ್ಗಳಲ್ಲಿ ದುಡೀರಿ, ಆ ಮೇಲೆ ಆವಿಸ್ನಾನ ಮಾಡಿ - ಕರೊನಾ ಓಡಿಸೋಕೆ ಇಷ್ಟು ಸಾಕು ಎನ್ನುತ್ತಿದ್ದಾರೆ ಆ ಮಹಾಪ್ರಜೆ. ಅಲ್ಲಿನ ಜನರಿಂದ ನಿಜ ವಿಷಯ ಮುಚ್ಚಿಡುವ ಪ್ರಯತ್ನ ಇದು ಎಂಬ ಟೀಕೆ ವ್ಯಾಪಕವಾಗಿದೆ. ಕಾರಣವೂ ಇಲ್ಲದಿಲ್ಲ.

ಏಪ್ರಿಲ್ 4ರ ವರದಿ ಪ್ರಕಾರ ಅಲ್ಲಿ ಸಾವಿನ ಸಂಖ್ಯೆ 4. ಮತ್ತೊಂದು ಸಾವು ಕೂಡ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇವಾವುದೂ ಅಧಿಕೃತ ಅಂಕಿ ಸಂಖ್ಯೆಗಳಲ್ಲ. ಬೆಲಾರಸ್​ ಸರ್ಕಾರ ಅಧಿಕೃತ ಡೇಟಾವನ್ನು ಬಿಡುಗಡೆ ಮಾಡಿಲ್ಲ, ಮಾಡುತ್ತಿಲ್ಲ. ಈ ಟೀಕೆ ವ್ಯಾಪಕವಾಗಿರುವ ಕಾರಣ ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆನ್ಕೊ ಮೇಲಿನ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹಳೆಯ ಸೋವಿಯತ್ ರಿಪಬ್ಲಿಕ್​ನ ನಾಲ್ಕನೇ ನಗರವಾಗಿರುವ ವಿಟೆಬ್ಸ್​ಕ್​ 22 ಸಾವು ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಎಲ್ಲ ಅಂಕಿ ಅಂಶಗಳನ್ನು ಅಲ್ಲಿನ ಆರೋಗ್ಯ ಅಧಿಕಾರಿಗಳು ಅನಧಿಕೃತವಾಗಿ ಸಾರ್ವಜನಿಕರಿಗೆ ಹಂಚಿಕೊಂಡು ಮನೆಯಲ್ಲೇ ಇದ್ದು ಜೀವು ಉಳಿಸುವಂತೆ ಮನವಿ ಮಾಡುತ್ತಿರುವ ಕಾರಣ ಬಹಿರಂಗವಾಗುತ್ತಿದೆ. ಆದರೆ, ದೇಶದಲ್ಲಿ ಏನಾಗುತ್ತಿದೆ ಎಂಬ ಕಲ್ಪನೆ ಯಾರಿಗೂ ಇಲ್ಲ.

ಒಂದಂತೂ ವಾಸ್ತವ, ಈ ಅಲೆಕ್ಸಾಂಡರ್​ ಯುರೋಪ್​ನ ಕೊನೆಯ ಡಿಕ್ಟೇಟರ್​ ಎಂದೇ ಕುಖ್ಯಾತಿ ಪಡೆದ ವ್ಯಕ್ತಿ. ಕೇವಲ ನಾಲ್ಕೇ ನಾಲ್ಕು ಜೀವ ವೈರಸ್​ನಿಂದಾಗಿ ಹೋಗಿರುವುದು ಎಂದು ದೃಢೀಕರಿಸುತ್ತ ಸತ್ಯ ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರತಿಷ್ಠೆ ಏನಕ್ಕೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಈ ವ್ಯಕ್ತಿ ಇನ್ನೂ ಉತ್ತರಿಸಿಲ್ಲ. ಆದರೆ, ಅವರ ಸಂದೇಶ ಸ್ಪಷ್ಟವಾಗಿದ್ದು, ಪಾಶ್ಚಿಮಾತ್ಯರು ಕಳವಳಪಟ್ಟುಕೊಂಡಿರಬಹುದು, ನಾವೇಕೆ ಹೆದರಬೇಕು. ಯೇಹೇ.. ಕರೊನಾ ಏನ್ ಮಹಾ.. ವೋಡ್ಕಾ ಕುಡೀರಿ, ಟ್ರ್ಯಾಕ್ಟರ್ಗಳಲ್ಲಿ ದುಡೀರಿ, ಆ ಮೇಲೆ ಆವಿಸ್ನಾನ ಮಾಡಿ - ಕರೊನಾ ಓಡಿಸೋಕೆ ಇಷ್ಟು ಸಾಕು ಎಂಬ ಹೇಳಿಕೆಯನ್ನು ಅಲೆಕ್ಸಾಂಡರ್ ನೀಡಿದ್ದರು. ಈ ಹೇಳಿಕೆ ಈಗ ಅಪಹಾಸ್ಯಕ್ಕೆ ಈಡಾಗಿದೆ.

ವಿವಿಧ ಮಾಧ್ಯಮಗಳ ಮಾಹಿತಿ ಪ್ರಕಾರ ಬೆಲಾರಸ್​ನಲ್ಲಿ COVID19 ಸೋಂಕು ತಗುಲಿದವರ ಸಂಖ್ಯೆ 440ರ ಗಡಿ ದಾಟಿದೆ. ಮರಣ ಪ್ರಮಾಣದ ಬಗ್ಗೆ ನಿಖರತೆ ಇಲ್ಲ. (ಏಜೆನ್ಸೀಸ್)