ಬೀಜಿಂಗ್: ಚೀನಾದಲ್ಲಿ ಮತ್ತೆ ಕರೊನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ರಾಜಧಾನಿ ಬೀಜಿಂಗ್ನ ತರಕಾರಿ ಹಾಗೂ ಮಾಂಸದ ಮಾರುಕಟ್ಟೆಯಲ್ಲಿ ಸಂಗ್ರಹಿಸಲಾದ 517 ಮಾದರಿಗಳ ಪೈಕಿ 45 ಜನರಲ್ಲಿ ಕೋವಿಡ್ ಇರುವುದು ಶನಿವಾರ ಖಚಿತವಾಗಿದೆ.
ಮಾರುಕಟ್ಟೆಯ ವ್ಯಾಪಾರಿಗಳಲ್ಲಿ ಕರೊನಾ ಪತ್ತೆಯಾಗುತ್ತಿದ್ದಂತೆ ಬೀಜಿಂಗ್ನ ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಒಂದಾದ ಕ್ಸಿನ್ಫಾಡಿ ತರಕಾರಿ ಹಾಗೂ ಮಾಂಸದ ಸಗಟು ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಇದಲ್ಲದೇ, ಮಾರುಕಟ್ಟೆ ಸುತ್ತಲಿನ 11 ವಸತಿ ಸಮುಚ್ಚಯಗಳನ್ನು ಲಾಕ್ಡೌನ್ ಮಾಡಲಾಗಿದೆ.
ಮಾರುಕಟ್ಟೆಯಲ್ಲಿ ಸೋಂಕು ಇರಬಹುದಾದ ಸಾವಿರಾರು ವ್ಯಾಪಾರಿಗಳನ್ನು ಹಾಗೂ ಇವರೊಂದಿಗೆ ಸಂಪರ್ಕಕ್ಕೆ ಬಂದ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಚೀನಾದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶದಿಂದ ತರಿಸಲಾಗುವ ಸಾಲ್ಮನ್ ಮೀನನ್ನು ಕತ್ತರಿಸುವ ಮರದ ದಿಮ್ಮಿಗಳ ಮೇಲೆ ಕರೊನಾ ವೈರಸ್ ಪತ್ತೆಯಾಗಿದೆ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೀಜಿಂಗ್ ಪ್ರಮುಖ ಸೂಪರ್ ಮಾರ್ಕೆಟ್ಗಳು ಸಾಲ್ಮನ್ ಮೀನಿನ ಮಾರಾಟವನ್ನು ಬಂದ್ ಮಾಡಿವೆ.
ಬೀಜಿಂಗ್ನಲ್ಲಿ ಕಳೆದ 55 ದಿನಗಳಿಂದ ಕರೊನಾದ ಹೊಸ ಕೇಸ್ ಪತ್ತೆಯಾಗಿರಲಿಲ್ಲ. ಕಳೆದ ವಾರ 52 ವರ್ಷದ ವ್ಯಕ್ತಿಯೊಬ್ಬ ಮೃತಪಡುವ ಮೂಲಕ ಕರೊನಾ ಮರುಕಳಿಸಿದೆ.
112 ಹೆಕ್ಟೇರ್ಗಳಲ್ಲಿ ಹಬ್ಬಿಕೊಂಡಿರುವ ಮಾರುಕಟ್ಟೆಯಲ್ಲಿ 1,500ಕ್ಕೂ ಹೆಚ್ಚು ನಿರ್ವಹಣಾ ಸಿಬ್ಬಂದಿ ಇದ್ದರೆ, 4,000ಕ್ಕೂ ವ್ಯಾಪಾರಿಗಳಿದ್ದಾರೆ. ಎಲ್ಲರನ್ನೂ ಪರೀಕ್ಷೆ ಮಾಡಲಾಗುತ್ತಿದೆ. ಕರೊನಾ ಜನ್ಮ ಸ್ಥಳವಾದ ವುಹಾನ್ ಮಾರುಕಟ್ಟೆ ಬಳಿಕ ಇದೀಗ ಮತ್ತೊಂದು ಮಾರುಕಟ್ಟೆ ಮೂಲಕ ಚೀನಾಗೆ ಕಂಟಕ ಎದುರಾಗಿದೆ.