ಪ್ರಯಾಗ್ರಾಜ್ದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಅಪಾರ ಜನರನ್ನು ಆಕರ್ಷಿಸುತ್ತಿದೆ. ಶತಮಾನಕ್ಕೊಮ್ಮೆ ನಡೆಯುವ ಮಹಾಕುಂಭಕ್ಕೆ ಸಾಕ್ಷಿಯಾಗಲು ದೇಶದ ಮೂಲೆಮೂಲೆಯ ಜನರು ಬರುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಅಭೂತಪೂರ್ವ ರೀತಿಯಲ್ಲಿ ವ್ಯವಸ್ಥೆ ಮಾಡಿದೆಯಾದರೂ, ಕೆಲ ಸಂಗತಿಗಳನ್ನು ತಿಳಿದಿರುವುದು ಉತ್ತಮ ಎಂಬ ಹಿನ್ನೆಲೆಯಲ್ಲಿ ಮಾರ್ಗದರ್ಶಿ ವಿವರವನ್ನು ಇಲ್ಲಿ ನೀಡಲಾಗಿದೆ.
- ಲಗೇಜ್ ಹೊತ್ತುಕೊಂಡು ಕನಿಷ್ಠ 6-8 ಕಿಮೀ ನಡೆಯಬೇಕು. ರೈಲಿನಲ್ಲಿ ಬಂದಿದ್ದರೆ 10 ಕಿಮೀ ನಡೆಯಬೇಕು. ನೀವೇ ಹೊತ್ತು ಒಯ್ಯಬಹುದಾದಷ್ಟು ಲಗೇಜ್ ಮಾತ್ರ ತೆಗೆದುಕೊಂಡು ಬನ್ನಿ. ಟ್ರಾಲಿ ಬ್ಯಾಗ್ ಬಳಸುವುದು ಸೂಕ್ತ.
- ದಿನಕ್ಕೆ 10 ಸಾವಿರ ರೂ. ಬಾಡಿಗೆಗೆ ಕೇವಲ ಟೆಂಟ್ಗಳು ಲಭ್ಯ, ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದೆ. (1.5 ಲಕ್ಷ ಟೆಂಟ್ಗಳು ಉಚಿತವಾಗಿ ಲಭ್ಯ ವಿದ್ದರೂ ಅವುಗಳನ್ನು ವಿವಿಧ ಪ್ರದೇಶಗಳ ಬಾಬಾಗಳಿಗೆ ಹಂಚಲಾಗಿದೆ)
- ಪ್ರಮುಖ ಸ್ನಾನದ ದಿನ ಬರಬೇಡಿ. ವಿಪರೀತ ಜನಸಂದಣಿ ಇರುತ್ತದೆ.
- ಸಂಚಾರ ದಟ್ಟಣೆ ಕಾರಣದಿಂದ ಆಟೋಗಳು, ಇ-ರಿಕ್ಷಾಗಳು, ಓಲಾದಂತಹ ಸೇವೆಗಳು ಕುಂಭಮೇಳದ ಸಮಯದಲ್ಲಿ ಸಿಗುವುದಿಲ್ಲ.
- ನೀವು ಕುಟುಂಬ ಅಥವಾ ತಂಡದಿಂದ ಬೇರ್ಪಟ್ಟರೆ, ಏನನ್ನಾದರೂ ಕಳೆದುಕೊಂಡರೆ 10 ಸ್ಥಳಗಳಲ್ಲಿರುವ ಅನೌನ್ಸ್ಮೆಂಟ್ ಟವರ್ಗಳಿಂದ ಅನೌನ್ಸ್ ಮಾಡಿಸಬಹುದು. ಆದರೆ ಎಷ್ಟು ಜನ ಅದನ್ನು ಗಮನಿಸುತ್ತಾರೆ ಎಂಬುದು ಪ್ರಶ್ನೆ. ಗುಣಮಟ್ಟದ ಜಿಪಿಎಸ್ ಟ್ಯಾಗ್ ಧರಿಸಿದರೆ ಪತ್ತೆ ಹಚ್ಚುವುದು ಸುಲಭ.
- ಶುಚಿರುಚಿಯಾದ ಆಹಾರವನ್ನು ಉಚಿತವಾಗಿ ವಿತರಿಸುವ ಸಮುದಾಯ ಕೇಂದ್ರಗಳು (ಭಂಡಾರ ಗಳು) ಇವೆ. ಅಲ್ಲಿ ನೀವು ಊಟ ಮಾಡಬಹುದು.
- ವಿಐಪಿಗಳಿಗಾಗಿ ದಿನಕ್ಕೆ 45ರಿಂದ 50 ಸಾವಿರ ರೂ.ಗೆ ಮಾರ್ಗದರ್ಶಿ ಪ್ರವಾಸ (ಗೈಡೆಡ್ ಟೂರ್) ಕೂಡ ಉಂಟು.
- ಸಮೀಪದ ರೈಲು ನಿಲ್ದಾಣ ಪ್ರಯಾಗರಾಜ್ ಸಂಗಮ್ ಆದರೆ ಅದನ್ನು ತೀವ್ರ ಜನದಟ್ಟಣೆ ಹಿನ್ನೆಲೆಯಲ್ಲಿ ಮುಖ್ಯ ಸ್ನಾನದ ಮೊದಲು ಮತ್ತು ನಂತರದ ಎರಡೆರಡು ದಿನ ಮುಚ್ಚಲಾಗುತ್ತದೆ. ಸಮೀಪದ ಇತರ ರೈಲು ನಿಲ್ದಾಣಗಳೆಂದರೆ ಜೂಸಿ ಮತ್ತು ಪ್ರಯಾಗ್ ಜಂಕ್ಷನ್ (ಪ್ರಯಾಗರಾಜ್ ಚಿಯೋಕಿ ಮತ್ತು ಪ್ರಯಾಗರಾಜ್ ಜಂಕ್ಷನ್ ಅಲ್ಲ)
- ಆಹಾರ ಮತ್ತು ಬ್ಲ್ಯಾಂಕೆಟ್ಗಳನ್ನು ಮಾರುತ್ತಿರುತ್ತಾರೆ, ಆದರೆ ಬೆಲೆ ದುಪ್ಪಟ್ಟು.
- ವಾರಾಣಸಿಯಿಂದ ರಸ್ತೆ ಮೂಲಕ ಬಂದರೆ ಜೂಸಿ ಬಳಿ ಇಳಿಸಲಾಗುತ್ತದೆ. ಅಲ್ಲಿಂದ 6 ಕಿಮೀ ನಡೆಯ ಬೇಕು. (ಹೆಚ್ಚಿನ ಹಣ ಕೊಟ್ಟರೆ ಆಟೋದವರು ಪೊಲೀಸರ ಕಣ್ತಪ್ಪಿಸಿ ಒಳದಾರಿಯಲ್ಲಿ ಹೋಗುತ್ತಾರೆ)
- ನಿಮಗೇನಾದರೂ ಸಮಸ್ಯೆಯಾದರೆ ಪೊಲೀಸರ ಸಹಾಯ ಪಡೆದುಕೊಳ್ಳಿ. ಎಲ್ಲಿಯಾದರೂ ತಪ್ಪು ತಿರುವು ತೆಗೆದುಕೊಂಡರೆ ಗಮ್ಯ ತಲುಪಲು ಹೆಚ್ಚಿಗೆ ಕ್ರಮಿಸಬೇಕಾಗುತ್ತದೆ. ಹಾಗಾಗಿ ಮೊದಲೇ ವಿಚಾರಿಸಿಕೊಂಡು ಮುನ್ನಡೆಯಿರಿ.
- ಸಂಗಮದಲ್ಲಿರುವ ನೀರು ಮತ್ತು ಅಲ್ಲಿನ ವಾತಾವರಣ ತುಂಬ ತಂಪಾಗಿರುತ್ತದೆ. ರಾತ್ರಿ ಹೆಚ್ಚು ಚಳಿ ಇರುತ್ತದೆ. ಬೆಚ್ಚಗಿನ ದಿರಿಸು ತರಲು ಮರೆಯಬೇಡಿ.
- ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಫೆ. 3ರಿಂದ 11. ಆಗ ಜನಸಂದಣಿ ಸ್ವಲ್ಪ ಕಡಿಮೆ ಇರುತ್ತದೆ.
- ಸಂಜೆ 7ರಿಂದ ಬೆಳಗಿನ ಜಾವ 3ರವರೆಗೆ ಜನಸಂದಣಿ ಕಡಿಮೆ ಇರುತ್ತದೆ.
- ಲಾಕರ್ಗಳು, ಕ್ಲಾಕ್ರೂಮ್ಳು ಲಭ್ಯವಿಲ್ಲ. ಹಾಗಾಗಿ ಆಭರಣ ಧರಿಸಿ ಕೊಂಡು ಬರಬೇಡಿ.
- ‘ನಿಮ್ಮನ್ನು ಸಂಗಮದಲ್ಲಿ ಡ್ರಾಪ್ ಮಾಡುತ್ತೇನೆ, ನೀವು ನಡೆಯುವ ಅಗತ್ಯ ಇಲ್ಲ’ ಎಂದು ಯಾರಾದರೂ ಹೇಳಿದರೆ ನಂಬಬೇಡಿ. ಮೇಳವನ್ನು ಪ್ರವೇಶಿಸಿದ ಬಳಿಕ 5-6 ಕಿಮೀ ನಡೆಯುವುದು ಅನಿವಾರ್ಯ.
- ಸಂಗಮದಲ್ಲಿ ನಿಗದಿತ ಸ್ಥಳದಲ್ಲೇ ಸ್ನಾನ ಮಾಡಬೇಕು. ಎಡಗಡೆ ಗಂಗಾ ನದಿ, ಬಲಗಡೆ ಯಮುನಾ ನದಿ ಹರಿಯುತ್ತಿವೆ.
- ಮೊಬೈಲ್ ನೆಟ್ವರ್ಕ್: ಉತ್ತಮ ಸಿಗ್ನಲ್ಗಾಗಿ ಜಿಯೋ ಬಳಸಿ. ಏಕೆಂದರೆ ಅದು 5ಜಿಯಲ್ಲೂ ಕೆಲಸ ಮಾಡುತ್ತದೆ. 2ನೇ ಸಿಮ್ ಕಾರ್ಡ್ ಕೂಡ ಟಾಪ್ಅಪ್ ಮಾಡಿಸಿ ಇಟ್ಟುಕೊಂಡಿರಿ. ವಿಪರೀತ ಜನಸಂದಣಿಯಿಂದಾಗಿ ಮೊಬೈಲ್ ಸಿಗ್ನಲ್ ದುರ್ಬಲವಾಗುವ ಸಾಧ್ಯತೆ ಇರುತ್ತದೆ.
- ಜನಸಂದಣಿಯಿಂದಾಗಿ ನೂಕುನುಗ್ಗಲು ಮತ್ತು ಕಾಲ್ತುಳಿತ ಸಂಭವಿಸುವ ಸಂಭವ ಇರುತ್ತದೆ. ಕುಟುಂಬ ಅಥವಾ ತಂಡದ ವರೆಲ್ಲ ಒಂದೇ ವಿಶಿಷ್ಟ ಬಣ್ಣದ ಕ್ಯಾಪ್, ಧ್ವಜ ಅಥವಾ ಇನ್ಯಾವುದಾದರೂ ಎತ್ತರದ ವಸ್ತು ಇರಿಸಿಕೊಂಡಿದ್ದರೆ, ದೂರದಿಂದಲೂ ಗುರುತಿಸಲು ಸಾಧ್ಯವಾಗುತ್ತದೆ.
- ಮೇಳದಲ್ಲೆಲ್ಲೂ ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳು ಇರುವುದಿಲ್ಲ. ಆದ್ದರಿಂದ ಪವರ್ಬ್ಯಾಂಕ್ ಜತೆಗಿರಲಿ.
- ನಿಮ್ಮ ಸ್ಥಳೀಯ ಬಾಬಾ ಜತೆ ಸಂಪರ್ಕದಲ್ಲಿರಿ ಅಥವಾ ಅವರ ಸಂಪರ್ಕ ವಿವರಗಳಿಗಾಗಿ ವೆಬ್ಸೈಟ್ ನೋಡಿ. ಅವರ ಶಿಬಿರದಲ್ಲಿ ನೀವು ತಂಗಲು ಸಾಧ್ಯವಿದ್ದರೆ, ಕುಂಭಮೇಳದ ಅನುಭವ ಅನನ್ಯವಾಗಿರುತ್ತದೆ. ಟೆಂಟ್ ಕೂಡ ಉಚಿತವಾಗಿ ಸಿಗುತ್ತದೆ.
- ಮುಖ್ಯ ಸ್ನಾನದ ದಿನ (ಅಮೃತಸ್ನಾನ)ಗಳಂದು ಬಾಬಾಗಳು, ನಾಗಾ ಸಾಧುಗಳು ಬೆಳಗ್ಗೆ 5.30ರಿಂದಲೇ ಬರಲು ಆರಂಭಿಸುತ್ತಾರೆ. ಅವರ ನಂತರವೇ ನಿಮಗೆ ಅವಕಾಶ ಸಿಗುತ್ತದೆಯಾದರೂ ಅಷ್ಟೊತ್ತಿಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ.