ಹೋಮದ ವೇಳೆ ಜೇನು ದಾಳಿ ವೇಳೆ ಕದಲದೆ ಕುಳಿತ ಮಹಿಳೆ 
ನ್ಯೂಸ್

Bee Attack: ಹೋಮ ಮಾಡುತ್ತಿದ್ದವರ ಮೇಲೆ ಜೇನು ದಾಳಿ: ಎದ್ದುಬಿದ್ದು ಓಡಿದ ಜನ, ಕದಲದೆ ಅಚಲ ಭಕ್ತಿ ಮೆರೆದ ಮಹಿಳೆ!

Bee Attack: ಮನೆಯಲ್ಲಿ ಹೋಮ ಮಾಡುತ್ತಿದ್ದ ಕುಟುಂಬದ ಮೇಲೆ ಏಕಾಏಕಿ ಜೇನುನೊಣಗಳ ಗುಂಪು ದಾಳಿ ಮಾಡಿದೆ. ಜೇನುನೊಣಗಳಿಂದ ತಪ್ಪಿಸಿಕೊಳ್ಳಲು ಮನೆಯವರೆಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ, ಮಹಿಳೆಯೊಬ್ಬರು ಮಾತ್ರ ಹೋಮದ ಮುಂದೆ ಕುಳಿತೇ ಪೂಜೆ ಮುಂದುವರಿಸಿದ್ದಾರೆ. ಈ ಘಟನೆಯ ಸಿಸಿಟಿವಿ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ ಮನೆಯ ತೆರೆದ ಅಂಗಳದಲ್ಲಿ ಕುಟುಂಬದ ಸದಸ್ಯರು ಚಾಪೆ ಮೇಲೆ ಕುಳಿತು ಹೋಮ ಮಾಡುತ್ತಿರುವುದನ್ನು ಕಾಣಬಹುದು. ಆರಂಭದಲ್ಲಿ ಎಲ್ಲವೂ ಶಾಂತವಾಗಿಯೇ ಇತ್ತು. ಆದರೆ, ಹೋಮದ ಕುಂಡದಿಂದ ಬರುತ್ತಿದ್ದ ದಟ್ಟ ಹೊಗೆ ಸಮೀಪದಲ್ಲಿದ್ದ ಜೇನುಗೂಡಿಗೆ ತೊಂದರೆ ಉಂಟುಮಾಡಿರಬಹುದು. ಇದರಿಂದ ಜೇನುನೊಣಗಳು ಏಕಾಏಕಿ ಗುಂಪಾಗಿ ಬಂದು ಕುಟುಂಬದವರ ಮೇಲೆ ದಾಳಿ ಮಾಡಿವೆ ಎಂದು ವರದಿಯಾಗಿದೆ.

ಹೋಮ ನಿಲ್ಲಿಸಿ ಓಡಿದ ಪುರೋಹಿತ

ಜೇನುನೊಣಗಳು ದಾಳಿ ಮಾಡುತ್ತಿದ್ದಂತೆ ಸ್ಥಳದಲ್ಲಿ ಗಲಾಟೆ ಶುರುವಾಗಿದೆ. ಅವುಗಳಿಂದ ತಪ್ಪಿಸಿಕೊಳ್ಳಲು ಕೆಲವರು ದಿಕ್ಕಾಪಾಲಾಗಿ ಓಡಿದ್ದಾರೆ. ಮಹಿಳೆಯೊಬ್ಬರು ಸೀರೆಯ ಸೆರಗಿನಿಂದ ತಲೆ ಮತ್ತು ದೇಹವನ್ನು ಮುಚ್ಚಿಕೊಂಡು ಅಲ್ಲಿಂದ ಓಡಿದ್ದಾರೆ. ಮತ್ತೊಬ್ಬ ವ್ಯಕ್ತಿ ಜೇನುನೊಣಗಳಿಂದ ತಪ್ಪಿಸಿಕೊಳ್ಳಲು ನೆಲದ ಮೇಲೆ ಮಲಗಿರುವುದೂ ವಿಡಿಯೋದಲ್ಲಿ ಸೆರೆಯಾಗಿದೆ. ಹೋಮ ಮಾಡಿಸುತ್ತಿದ್ದ ಪುರೋಹಿತರೂ ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಿ ಸುರಕ್ಷಿತ ಸ್ಥಳಕ್ಕೆ ಓಡಿದ್ದಾರೆ.

ಜೇನು ಕಚ್ಚಿದರೂ ಪೂಜೆ ನಿಲ್ಲಿಸದ ಮಹಿಳೆ

ಇಷ್ಟೆಲ್ಲಾ ಗದ್ದಲ ನಡೆಯುತ್ತಿದ್ದರೂ ಮಹಿಳೆಯೊಬ್ಬರು ಮಾತ್ರ ಹೋಮದ ಕುಂಡದ ಮುಂದೆ ಕುಳಿತಲ್ಲಿಂದ ಕದಲಿಲ್ಲ. ಸುತ್ತಲೂ ಜೇನುನೊಣಗಳು ಹಾರಾಡುತ್ತಿದ್ದರೂ ಅವರು ಪ್ರಾರ್ಥನೆ ಮತ್ತು ಮಂತ್ರ ಪಠಣ ಮುಂದುವರಿಸಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ರಾಮಾಯಣ 2ರಲ್ಲಿ ಹನುಮಂತನಾಗಿ ಸನ್ನಿ ಡಿಯೋಲ್ ಅಬ್ಬರ; ಸಿನಿಮಾ ಬಗ್ಗೆ ಬಂತು ಬಿಗ್ ಅಪ್‌ಡೇಟ್! | Ramayana 2

ಮನೆಯವರೆಲ್ಲರೂ ಜೇನುನೊಣಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದರೆ, ಮಹಿಳೆ ಮಾತ್ರ ಪೂಜೆ ಮುಂದುವರಿಸಿರುವ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಮತ್ತು ಕುಟುಂಬದ ಸದಸ್ಯರ ಆರೋಗ್ಯದ ಸ್ಥಿತಿ ಹೇಗಿದೆ ಎಂಬ ಬಗ್ಗೆ ತಿಳಿದುಬಂದಿಲ್ಲ.k: